ಚಾಮರಾಜನಗರ, ಫೆ.16 (DaijiworldNews/PY): ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿ ವಿಚಾರಣಾ ಕೈದಿಯಾಗಿದ್ದಾಗ ಸಾವನ್ನಪ್ಪಿದ್ದರೂ, ಬಾಲಕಿ ಭವಿಷ್ಯದ ದೃಷ್ಟಿಯಿಂದ ಬಾಲಕಿಗೆ ಜಿಲ್ಲಾ ಸೇವಾ ಪ್ರಾಧಿಕಾರದಿಂದ ಐದು ಲಕ್ಷ ರೂ.ಪರಿಹಾರ ಸೇರಿದಂತೆ ರಾಜ್ಯ ಸರ್ಕಾರದಿಂದ ಉನ್ನತ ಶಿಕ್ಷಣ, ಪದವಿ, ಸ್ನಾತಕೋತ್ತರ ಪದವಿ, ಪಿಎಚ್ ಡಿ ಅಥವಾ ಐಎಎಸ್ ಶಿಕ್ಷಣಕ್ಕೆ ಬೇಕಾದ ಸೌಲಭ್ಯ ನೀಡಬೇಕು ಎಂದು ನಗರದ ಜಿಲ್ಲಾ ಹಾಗೂ ಸೆಷನ್ಸ್ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದೆ.
ಸಾಂದರ್ಭಿಕ ಚಿತ್ರ
ಯಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರ ನಿವಾಸಿ ರಂಗಶೆಟ್ಟಿ(65) ಎಂಬಾತ 2019ರ ಸೆ.19ರಂದು ಅದೇ ಗ್ರಾಮದ 11 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ವೆಸಗಿದ್ದ. ಘಟನೆಯ ಬಗ್ಗೆ ಆರೋಪಿಯ ವಿರುದ್ದ ಯಳಂದೂರು ಠಾಣೆ ಪೊಲೀಸರು ಆರೋಪಿಯ ವಿರುದ್ದ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಘಟನೆಯ ಬಗ್ಗೆ ವಿಚಾರಣೆ ಮುಗಿಯುವ ಮೊದಲೇ ನ್ಯಾಯಾಂಗ ಬಂಧನದಲ್ಲಿ ಆರೋಪಿ ಸಾವನ್ನಪ್ಪಿದ್ದ. ಅತ್ಯಾಚಾರ ನಡೆದಿರುವ ಬಗ್ಗೆ ಸಂತ್ರಸ್ತೆ ನ್ಯಾಯಾಲಯದಲ್ಲಿ ಸಾಕ್ಷ್ಯಾಧಾರಗಳ ಸಮೇತ ತಿಳಿಸಿದ್ದಳು. ಆರೋಪ ಸಾಬೀತಾದ ಹಿನ್ನೆಲೆ, ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಸದಾಶಿವ ಸುಲ್ತಾನಪುರಿ ಅವರು ಸಾಮಾಜಿಕ ಕಳಕಳಿಯಿಂದ ಕಾನೂನು ಸೇವಾ ಪ್ರಾಧಿಕಾರದಿಂದ 5 ಲಕ್ಷ ರೂ. ಪರಿಹಾರಕ್ಕೆ ಆದೇಶಿಸಿದ್ದಾರೆ.
ಐದು ಲಕ್ಷ ರೂ.ಗಳನ್ನು ಬ್ಯಾಂಕ್ನಲ್ಲಿ ಠೇವಣಿ ಇಟ್ಟು, ಅದರಿಂದ ಬರುವ ಬಡ್ಡಿಯಿಂದ ಬಾಲಕಿಯು ಪ್ರಾಪ್ತಳಾಗುವವರೆಗೆ ವಿನಿಯೋಗ ಮಾಡಬಹುದು. ರಾಜ್ಯ ಸರ್ಕರವೇ ಬಾಲಕಿಯ ಎಲ್ಲಾ ರೀತಿಯ ಶಿಕ್ಷಣದ ವೆಚ್ಚವನ್ನು ಭರಿಸಬೇಕು ಎಂದು ಆದೇಶ ನೀಡಿದೆ.