ಬೆಂಗಳೂರು, ಫೆ.16 (DaijiworldNews/PY): ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ನೀಡುವ 2020ನೇ ಸಾಲಿನ ಮಾಸ್ತಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಸಾಹಿತಿ ಸುಬ್ರಾಯ ಚೊಕ್ಕಾಡಿ, ತರಂಗ ವಾರ ಪತ್ರಿಕೆ ಹಾಗೂ ತುಷಾರ ಮಾಸಿಕಗಳ ವ್ಯವಸ್ಥಾಪಕ ಸಂಪಾದಕಿ, ಹಿರಿಯ ಲೇಖಕಿ ಡಾ. ಸಂಧ್ಯಾ ಎಸ್.ಪೈ ಸೇರಿದಂತೆ ಆರು ಮಂದಿ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ವಿದ್ಯಾಭವನದಲ್ಲಿ ಮಾ.27ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.
ಸುಬ್ರಾಯ ಚೊಕ್ಕಾಡಿ (ಕಾವ್ಯ), ಪ್ರೊ.ಪುರುಷೋತ್ತಮ ಬಿಳಿಮಲೆ (ಸಂಶೋಧನೆ), ವಿಮರ್ಶಕ ಎಸ್.ಆರ್.ವಿಜಯಶಂಕರ್ (ವಿಮರ್ಶೆ), ಸ.ರಘುನಾಥ (ಸೃಜನಶೀಲ), ಕೇಶವ ರೆಡ್ಡಿ ಹಂದ್ರಾಳ (ಕಥೆ) ಹಾಗೂ ಸಂಧ್ಯಾ ಎಸ್.ಪೈ (ಶಿಶು ಸಾಹಿತ್ಯ) ಅವರು ಮಾಸ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ 129ನೇ ಸಂಸ್ಮರಣ ವರ್ಷದ ಅಂಗವಾಗಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
ಈ ಪ್ರಶಸ್ತಿಯು 25 ಸಾವಿರ ರೂ. ನಗದು ಹಾಗೂ ಫಲಕವನ್ನು ಒಳಗೊಂಡಿದೆ.