ಬೆಂಗಳೂರು, ಫೆ.16 (DaijiworldNews/PY): "ರಾಮಮಂದಿರಕ್ಕೆ ಹಣ ಸಂಗ್ರಹಿಸುತ್ತಿರುವವರು ಹಣ ಕೊಟ್ಟವರ, ಕೊಡದವರ ಮನೆ ಗುರುತು ಮಾಡುತ್ತಿರುವುದು ತಿಳಿಯಿತು. ಯಾತಕ್ಕೆ ಹೀಗೆ ಮಾಡುತ್ತಿದ್ದಾರೆಂಬುದು ಗೊತ್ತಿಲ್ಲ" ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ರಾಮಮಂದಿರಕ್ಕೆ ಹಣ ಸಂಗ್ರಹಿಸುತ್ತಿರುವವರು ಹಣ ಕೊಟ್ಟವರ, ಕೊಡದವರ ಮನೆ ಗುರುತು ಮಾಡುತ್ತಿರುವುದು ತಿಳಿಯಿತು. ಯಾತಕ್ಕೆ ಹೀಗೆ ಮಾಡುತ್ತಿದ್ದಾರೆಂಬುದು ಗೊತ್ತಿಲ್ಲ. ಹಿಟ್ಲರ್ ಕಾಲದಲ್ಲಿ ನಾಜಿ-ಯಹೂದಿಗಳಿಗೆ ಗಲಾಟೆ ನಡೆದು ಲಕ್ಷಾಂತರ ಜನರ ಮಾರಣ ಹೋಮ ನಡೆಯಿತು. ದೇಶದಲ್ಲಿ ನಡೆಯುತ್ತಿರುವ ಈ ಬೆಳವಣಿಗೆ ಎಲ್ಲಿ ತಲುಪುತ್ತದೆ ಗೊತ್ತಿಲ್ಲ" ಆತಂಕ ವ್ಯಕ್ತಪಡಿಸಿದ್ದಾರೆ.
"ಜರ್ಮನಿಯಲ್ಲಿ ನಾಜಿ ಹುಟ್ಟಿದ ಕಾಲದಲ್ಲೇ ಆರೆಸ್ಸೆಸ್ ಹುಟ್ಟಿದೆ ಎಂದು ಇತಿಹಾಸಜ್ಞರು ಹೇಳುತ್ತಾರೆ.ಆರೆಸ್ಸೆಸ್ ಕೂಡ ಆ ನೀತಿಗಳನ್ನೇ ಜಾರಿ ಮಾಡಿದರೆ ಮುಂದೇನಾಗುತ್ತದೆಂಬ ಆತಂಕವಿದೆ. ದೇಶದಲ್ಲಿ ಮೂಲಭೂತ ಹಕ್ಕನ್ನೆ ಕಸಿಯಲಾಗುತ್ತಿದೆ. ಸ್ವತಂತ್ರವಾಗಿ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲದ ಸ್ಥಿತಿ ಇದೆ. ಇದು ಅಘೋಷಿತ ತುರ್ತು ಪರಿಸ್ಥಿತಿ" ಎಂದು ತಿಳಿಸಿದ್ದಾರೆ.
"ಯಾರೊಬ್ಬರೂ ತಮ್ಮ ಭಾವನೆಗಳನ್ನು ಹೇಳಿಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಮಾಧ್ಯಮಗಳು ಸರ್ಕಾರದ ಭಾವನೆಗಳನ್ನು ಎತ್ತಿಹಿಡಿದರೆ ಯಾರಿಗೆ ಏನಾಗುತ್ತದೆಯೋ ಗೊತ್ತಿಲ್ಲ. ಇನ್ನೂ ಜನಸಾಮಾನ್ಯರ ಪರಿಸ್ಥಿತಿ ಏನಾಗಬಹುದು? ವಾತಾವರಣವನ್ನು ನೋಡಿದಾಗ ದೇಶದಲ್ಲಿ ಏನು ಬೇಕಾದರೂ ಆಗಬಹುದು ಎಂಬುದಂತೂ ನಿಚ್ಚಳವಾಗಿದೆ" ಎಂದಿದ್ದಾರೆ.