ಅಹಮದಾಬಾದ್, ಫೆ.16 (DaijiworldNews/PY): ಗೋಧ್ರಾ ರೈಲು ಹತ್ಯಾಕಾಂಡಕ್ಕೆ ಸಂಬಂಧಪಟ್ಟಂತೆ 19 ವರ್ಷಗಳ ನಂತರ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಗೋಧ್ರಾ ನಗರದ ರಫೀಕ್ ಹುಸೇನ್ ಭಾತುಕ್ ಎಂದು ಗುರುತಿಸಲಾಗಿದೆ. ಸಂಚು ರೂಪಿಸುವಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದ ಎಂದು ಪಂಚಮಹಲ್ ಠಾಣೆಯ ಪೊಲೀಸರು ಹೇಳಿದ್ದಾರೆ.
"ರೈಲ್ವೆ ನಿಲ್ದಾಣದ ಬಳಿಯ ಸಿಗ್ನಲ್ ಫಾಲಯಾ ಪ್ರದೇಶದಲ್ಲಿನ ಮನೆಯೊಂದರಲ್ಲಿ ರಫೀಕ್ ಇರುವ ಬಗ್ಗೆ ಮಾಹಿತಿ ಖಚಿತ ಪಡೆದ ಪೊಲೀಸರು ರವಿವಾರ ರಾತ್ರಿ ಕಾರ್ಯಾಚರಣೆ ನಡೆಸಿ ರಫೀಕ್ನನ್ನು ಬಂಧಿಸಿದ್ದಾರೆ. ರೈಲು ಬೋಗಿಗಳಿಗೆ ಬೆಂಕಿ ಹಚ್ಚಲು ಈತ ಪೆಟ್ರೋಲ್ ವ್ಯವಸ್ಥೆ ಮಾಡಿದ್ದ ಹಾಗೂ ಗಲಭೆ ನಡೆಯಲು ಕೂಡಾ ಪ್ರಚೋದನೆ ನೀಡಿದ್ದ. ತನಿಖೆಯ ವೇಳೆ ಈತನ ಹೆಸರು ಕಾಣಿಸಿಕೊಂಡ ಕೂಡಲೇ ಈತ ದೆಹಲಿಗೆ ಪರಾರಿಯಾಗಿದ್ದ. ರಫೀಕ್ನ ವಿರುದ್ದ ಕೊಲೆ ಹಾಗೂ ಗಲಭೆ ಸೃಷ್ಟಿಸಿದ ಆರೋಪಗಳನ್ನು ಹೊರಿಸಲಾಗಿದೆ" ಎಂದು ಹೇಳಿದ್ದಾರೆ.
2002ರ ಫೆ.27ರಂದು ರೈಲಿಗೆ ಬೆಂಕಿ ಹಚ್ಚಿದ್ದ ಕಾರಣ ಸುಮಾರು 59 ಮಂದಿ ಕರಸೇವಕರು ಸಜೀವ ದಹನವಾಗಿದ್ದರು. ಇದಾದಾ ಬಳಿಕ ಗುಜರಾತ್ನಲ್ಲಿ ವ್ಯಾಪಕವಾದ ಕೋಮುಗಲಭೆ ನಡೆದಿತ್ತು.
"ರಫೀಕ್ ಗೋಧ್ರಾ ರೈಲ್ವೆ ನಿಲ್ದಾಣದಲ್ಲಿ ಕಾರ್ಮಿನಾಗಿ ದುಡಿಯುತ್ತಿದ್ದ. ಈತ ರೈಲು ಬೋಗಿಗಳ ಮೇಲೆ ಕಲ್ಲು ತೂರಾಟ ನಡೆಸಿ ಪೆಟ್ರೋಲ್ ಸುರಿದಿದ್ದ. ನಂತರ ಇತರ ಆರೋಪಿಗಳು ರೈಲಿಗೆ ಬೆಂಕಿ ಹಚ್ಚಿದ್ದರು. ಗೋಧ್ರಾದಿಂದ ತಲೆಮರೆಸಿಕೊಂಡಿದ್ದ ರಫೀಕ್ ದೆಹಲಿಯಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಹಾಗೂ ಕಟ್ಟಡ ನಿರ್ಮಾಣದ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದ" ಎಂದು ಲೀನಾ ಪಾಟೀಲ್ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಸಲೀಂ ಇಬ್ರಾಹಿಂ ಬಾದಾಮ್ ಅಕಾಂ ಸಲೀಂ ಪನ್ವಾಲಾ, ಶೌಕತ್ ಚರ್ಕಾ ಹಾಗೂ ಅಬ್ದುಲ್ ಮಜೀದ್ ಯೂಸುಫ್ ಇನ್ನೂ ಪತ್ತೆಯಾಗಿಲ್ಲ. ಈ ಮೂವರು ಕೂಡಾ ಪಾಕಿಸ್ತಾನಕ್ಕೆ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.