ಬೆಂಗಳೂರು, ಫೆ.15 (DaijiworldNews/HR): ಮನೆಯಲ್ಲಿ ಫ್ರಿಡ್ಜ್, ಬೈಕ್, ಟಿವಿ ಇದ್ದಲ್ಲಿ ಬಿಪಿಎಲ್ ಪಡಿತರ ಚೀಟಿ ರದ್ದು ಮಾಡಲಾಗುವುದು ಎಂದು ಹೇಳಿಕೆ ನೀಡಿದ್ದ ಆಹಾರ ಸಚಿವ ಉಮೇಶ್ ಕತ್ತಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, "ಸಚಿವ ಉಮೇಶ್ ಕತ್ತಿಯವರೇ, ನಿಮ್ಮದೇ ಒಂದು ರಾಜ್ಯ ಕಟ್ಟಿ ನೀವೇ ಮುಖ್ಯಮಂತ್ರಿಗಳಾದಾಗ ಇಂತಹ ತುಘಲಕ್ ದರ್ಬಾರ್ ನಡೆಸಿ. ಈಗ ಕಷ್ಟಪಟ್ಟು ಗಳಿಸಿರುವ ಮಂತ್ರಿಸ್ಥಾನದಲ್ಲಿ ಕೂತು ಜನತೆಗೆ ಒಳ್ಳೆಯದನ್ನು ಮಾಡಿ. ನಿಮ್ಮ ಅಧಿಕ ಪ್ರಸಂಗತನದ ವಿರುದ್ಧ ಜನ ರೊಚ್ಚಿಗೆದ್ದು ಕತ್ತಿ ಬೀಸಿದರೆ ಇದ್ದ ಕುರ್ಚಿಯೂ ಬಿಡಬೇಕಾದೀತು" ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು "ಐದು ಎಕ್ರೆಗಿಂತ ಅಧಿಕ ಜಮೀನು ಸೇರಿದಂತೆ ಮನೆಯಲ್ಲಿ ಟಿವಿ, ಫ್ರಿಡ್ಜ್ ಹಾಗೂ ಬೈಕ್ ಇದ್ದವರ ಪಡಿತರ ಚೀಟಿಯನ್ನು ರದ್ದು ಮಾಡಲಾಗುತ್ತದೆ. ಇವುಗಳ ಪೈಕಿ ಯಾವುದಾದರು ಒಂದು ಇದ್ದಲ್ಲಿ ಬಿಪಿಎಲ್ ಕಾರ್ಡ್ ಅನ್ನು ರದ್ದು ಮಾಡಲಾಗುತ್ತದೆ. ಇಂಥವರಿಗೆ ತಮ್ಮ ಬಿಪಿಎಲ್ ಕಾರ್ಡ್ ಅನ್ನು ಹಿಂದಿರುಗಿಸಲು ಮಾರ್ಚ್ ಅಂತ್ಯದವರೆಗೆ ಸಮಯಾವಕಾಶ ನೀಡಲಾಗುತ್ತದೆ" ಎಂದು ಸಚಿವ ಉಮೇಶ್ ಕತ್ತಿ ಹೇಳಿಕೆ ನೀಡಿದ್ದರು.
ಆದರೆ ಇದೀಗ ಮತ್ತೆ ಯು ಟರ್ನ್ ಹೊಡೆದ ಕತ್ತಿ "ಬಿಪಿಎಲ್ ಕಾರ್ಡ್ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ" ಎಂದು ಹೇಳಿದ್ದಾರೆ.