ಬೆಂಗಳೂರು, ಫೆ.15 (DaijiworldNews/HR): ಮನೆಯಲ್ಲಿ ಫ್ರಿಡ್ಜ್, ಬೈಕ್, ಟಿವಿ ಇದ್ದಲ್ಲಿ ಬಿಪಿಎಲ್ ಪಡಿತರ ಚೀಟಿ ರದ್ದು ಮಾಡಲಾಗುವುದು ಎಂದು ಹೇಳಿಕೆ ನೀಡಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಇದೀಗ ಯು ಟರ್ನ್ ಹೊಡೆದಿದ್ದು, "ಬಿಪಿಎಲ್ ಕಾರ್ಡ್ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಉಮೇಶ್ ಕತ್ತಿ ಅವರ ಈ ಹೇಳಿಕೆಗೆ ಅನೇಕ ವಿರೋಧಗಳು ಕೇಳಿಬಂದಿದ್ದು, ಇದೀಗ "ಬಿಪಿಎಲ್ ಕಾರ್ಡ್ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಹಿಂದೆ ಮಾನದಂಡಗಳೇ ಮುಂದುವರಿಸಲಾಗುವುದು" ಎಂದು ಹೇಳಿದ್ದಾರೆ.
ಇನ್ನು ಉಮೇಶ್ ಕತ್ತಿಯವರು "ಐದು ಎಕ್ರೆಗಿಂತ ಅಧಿಕ ಜಮೀನು ಸೇರಿದಂತೆ ಮನೆಯಲ್ಲಿ ಟಿವಿ, ಫ್ರಿಡ್ಜ್ ಹಾಗೂ ಬೈಕ್ ಇದ್ದವರ ಪಡಿತರ ಚೀಟಿಯನ್ನು ರದ್ದು ಮಾಡಲಾಗುತ್ತದೆ. ಇವುಗಳ ಪೈಕಿ ಯಾವುದಾದರು ಒಂದು ಇದ್ದಲ್ಲಿ ಬಿಪಿಎಲ್ ಕಾರ್ಡ್ ಅನ್ನು ರದ್ದು ಮಾಡಲಾಗುತ್ತದೆ. ಇಂಥವರಿಗೆ ತಮ್ಮ ಬಿಪಿಎಲ್ ಕಾರ್ಡ್ ಅನ್ನು ಹಿಂದಿರುಗಿಸಲು ಮಾರ್ಚ್ ಅಂತ್ಯದವರೆಗೆ ಸಮಯಾವಕಾಶ ನೀಡಲಾಗುತ್ತದೆ" ಎಂದಿದ್ದರು.