ಹಾವೇರಿ,ಫೆ.15 (DaijiworldNews/HR): "ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸುಮಾರು 40 ವರ್ಷದ ರಾಜಕಾರಣದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದು, ಈಗ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಗಳಾಗಿ ಉತ್ತಮ ಆಡಳಿತ ನೀಡುತ್ತಿದ್ದು, ಕರ್ನಾಟಕದ ರಾಜಾಹುಲಿ ಎಂದೆನಿಸಿಕೊಂಡಿದ್ದಾರೆ" ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯಡಿಯೂರಪ್ಪರಂತೆ ಅವರ ಪುತ್ರ ವಿಜಯೇಂದ್ರ ಅವರಿಗೂ ಸಾಕಷ್ಟು ಉಳಿಪೆಟ್ಟುಗಳು ಬೀಳಲಿದ್ದು, ಸುಂದರ ಮೂರ್ತಿಯಾಗಿ ರೂಪುಗೊಳ್ಳಲಿದ್ದೀರಿ. ಮುಂದೆ ಯಡಿಯೂರಪ್ಪ ಅವರಂತೆ ರಾಜಾಹುಲಿಯಾಗಿ ಹೊರಹೊಮ್ಮಲಿ, ಕರ್ನಾಟಕದಲ್ಲಿ ಉತ್ತಮ ಸೇವೆ ಮಾಡಲಿ" ಎಂದರು.
ಇನ್ನು ಬಿಪಿಎಲ್ ಕಾರ್ಡ್ ರದ್ದು ವಿಚಾರದ ಕುರಿತು ಮಾತನಾಡಿದ ಅವರು, "ಬಿಪಿಎಲ್ ಕಾರ್ಡ್ ಹೊಂದಲು ಕೆಲವೊಂದು ನಿಯಮಗಳಿದ್ದು, ಅದನ್ನು ಉಲ್ಲಂಘಿಸಿದರೆ ಮಾತ್ರ ರದ್ದುಪಡಿಸಿರುವುದಾಗಿ ಸಚಿವರಾದ ಉಮೇಶ್ ಕತ್ತಿಯವರು ಹೇಳಿರಬಹುದು. ಆ ಬಗ್ಗೆ ನನಗೆ ಹೆಚ್ಚಿನ ಮಾಹಿತಿಯಿಲ್ಲ. ಒಂದು ಬೈಕ್ ಅಥವಾ ಟಿವಿ ಇದ್ದರೆ ರದ್ದು ಮಾಡುವ ಬಗ್ಗೆ ಯಾವುದೇ ಪ್ರಸ್ತಾಪ ಇದ್ದಂತೆ ಕಾಣುತ್ತಿಲ್ಲ. ಕೆಲವೊಂದು ಮನೆಗಳಲ್ಲಿ 3 ರಿಂದ 4 ಬೈಕ್ ಗಳನ್ನು ಇಟ್ಟುಕೊಂಡಿರುವ ಬಗ್ಗೆ ದೂರುಗಳು ಬಂದಿದ್ದು, ಈ ಹಿನ್ನೆಲೆಯಲ್ಲಿ ನಿಯಮಗಳಿಗನುಸಾರವಾಗಿ ರದ್ದು ಮಾಡುವ ಬಗ್ಗೆ ಸಚಿವರು ಪ್ರಸ್ತಾಪ ಮಾಡಿರಬಹುದು" ಎಂದು ಹೇಳಿದ್ದಾರೆ.