ಚಾಮರಾಜನಗರ, ಫೆ.15 (DaijiworldNews/HR): "ಬಡವರ ಮೇಲೆ ಬರೆ ಹಾಕಿ ಯಾವ ಸರ್ಕಾರ ಖುಷಿ ಪಡುವುದಿಲ್ಲ, ಬದಲಾಗಿ ಬಡವರ ಹೊರೆ ಕಡಿಮೆ ಮಾಡುವುದು ಸರ್ಕಾರದ ಉದ್ದೇಶ" ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪೆಟ್ರೋಲ್, ಡಿಸೇಲ್, ಗ್ಯಾಸ್ ಎಲ್ಲಾ ಬೆಲೆ ಇಳಿಕೆ ಮಾಡುವುದೇ ಸರ್ಕಾರದ ಉದ್ದೇಶವಾಗಿದ್ದು, ಬೆಲೆ ಏರಿಕೆ ಮಾಡಿ ಬೊಕ್ಕಸ ತುಂಬಿಕೊಳ್ಳುವ ಉದ್ದೇಶ ಸರ್ಕಾರಕ್ಕಿಲ್ಲ. ಪೆಟ್ರೋಲ್, ಡಿಸೇಲ್ ಅಡುಗೆ ಅನಿಲ ಬೆಲೆ ಕಡಿಮೆಯಾದಾಗ ಯಾರೂ ಕೂಡ ಮಾತನಾಡಿಲ್ಲ. ಜಾಸ್ತಿಯಾದಾಗ ಮಾತನಾಡುವುದು ಸಹಜ" ಎಂದರು.
ಇನ್ನು ಟಿವಿ, ಫ್ರಿಡ್ಜ್,ವಾಹನ ಹೊಂದಿರುವವರಿಗೆ ಬಿಪಿಎಲ್ ಕಾರ್ಡ್ ರದ್ದು ಮಾಡುವ ಉಮೇಶ್ ಕತ್ತಿ ವಿಚಾರವಾಗಿ ಮಾತನಾಡಿದ ಅವರು, "ಯಾವ ಆಧಾರದ ಮೇಲೆ ಹೇಳಿದ್ದಾರೆ ಎನ್ನುವುದು ತಿಳಿದುಕೊಳ್ಳಬೇಕು. ಖುದ್ದಾಗಿ ನಾನು ಉಮೇಶ್ ಕತ್ತಿ ಜೊತೆ ಮಾತನಾಡುತ್ತೇನೆ. ಎಲ್ಲರ ಮನೆಯಲ್ಲೂ ಟಿವಿ ಇರುವುದು ಸರ್ವೇ ಸಾಮಾನ್ಯ. ಸಮಾಜದ ಕಟ್ಟ ಕಡೆಯ ಕುಟುಂಬದ ಮಗುವು ಚಂದನ ವಾಹಿನಿ ನೋಡಿ ಸಂವೇದ ಕಾರ್ಯಕ್ರಮ ವೀಕ್ಷಿಸಿ ಪಾಠ ಕಲಿತಿದೆ" ಎಂದು ಹೇಳಿದ್ದಾರೆ.