ಪುಣೆ, ಫೆ.15 (DaijiworldNews/HR): ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಾಧೀಶರಾದ ಪಿ.ಬಿ. ಸಾವಂತ್(91) ಅವರು ಸೋಮವಾರ ಬೆಳಗ್ಗೆ ಪುಣೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಸಾವಂತ್ ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ ಎಂದು ಬಾಂಬೆ ಹೈಕೋರ್ಟ್ನ ಮಾಜಿ ನ್ಯಾಯಾಧೀಶ ಬಿ.ಜಿ.ಕೋಲ್ಸೆ ಪಾಟೀಲ್ ಹೇಳಿದ್ದಾರೆ.
ಇನ್ನು ಸಾವಂತ್ ಅವರು 1930, ಜೂನ್ 30 ರಂದು ಜನಿಸಿದ್ದು, ಬಾಂಬೆ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ನಲ್ಲಿ 1957ರಲ್ಲಿ ವಕೀಲರಾಗಿ ಅಭ್ಯಾಸ ಮಾಡಿದ್ದರು. 1973ರಲ್ಲಿ ಬಾಂಬೆ ಹೈಕೋರ್ಟಿನ ನ್ಯಾಯಾಧೀಶರನ್ನಾಗಿ ನೇಮಿಸಲಾಗಿತ್ತು. ಬಳಿಕ 1989 ಅಕ್ಟೋಬರ್ 6ರಂದು ಜಾರಿಗೆ ಬರುವಂತೆ ಸುಪ್ರೀಂಕೋರ್ಟ್ ಪೀಠ ಏರಿದ್ದು, ಜೂನ್ 6,1995ರಂದು ನಿವೃತ್ತರಾದರು ಎನ್ನಲಾಗಿದೆ.