ಶಿವಮೊಗ್ಗ, ಫೆ.15 (DaijiworldNews/HR): "ಕರ್ನಾಟಕದಲ್ಲಿರುವುದು ಬಿಜೆಪಿ ಸರ್ಕಾರವಲ್ಲ, ಬದಲಾಗಿ ಬಿ.ಎಸ್. ಯಡಿಯೂರಪ್ಪನವರ ಕುಟುಂಬದ ಸರ್ಕಾರ" ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಶಿವಮೊಗ್ಗದಲ್ಲಿ ಮಾತನಾಡಿದ ಅವರು, "ಬಜೆಟ್ನ ಕಾರ್ಯಕ್ರಮಗಳನ್ನು ವಿಭಜಿಸಿ ಶಿವಮೊಗ್ಗದ ನಗರದ ಅಭಿವೃದ್ದಿಗೆ ನೀಡಲಾಗಿದ್ದು, ನಾನು ಶಿವಮೊಗ್ಗದ ಕೆಲ ಪ್ರದೇಶಗಳನ್ನ ನೋಡಿದ್ದೇನೆ. ಅವುಗಳ ಅಭಿವೃದ್ಧಿ ಆಗಿಲ್ಲ. ಎರಡು ವರ್ಷದ ಬಜೆಟ್ ಹಣ ಎಲ್ಲಿ ಹೋಯಿತು. ರಾಜ್ಯದ ಜನರು ಕಟ್ಟುವ ತೆರಿಗೆ ಹಣ ದುರ್ಬಳಿಕೆ ಆಗುತ್ತಿದೆ" ಎಂದರು.
ಇನ್ನು "ಮೈತ್ರಿ ಸರ್ಕಾರ ಪತನವಾದ ಬಳಿಕ ಬಂದ ಸರ್ಕಾರ ಎರಡು ವರ್ಷದಲ್ಲಿ ಮಾಡಿರುವ ಘೋಷಣೆಗಳು, ಜನಸಾಮಾನ್ಯರಿಗೆ ಹೇಗೆ ಸ್ಪಂದಿಸಿದ್ದಾರೆ ಎನ್ನುವುದನ್ನ ನೋಡಿದ್ದೇನೆ. 2018 ರಲ್ಲಿ ಮಳೆಯಿಂದಾಗಿ ಮನೆಗಳು ಬಿದ್ದಿದ್ದವು, ಮನೆ ಕಟ್ಟಲು 5 ಲಕ್ಷ ನೀಡುತ್ತೇವೆ ಎಂದು ಸರ್ಕಾರ ಹೇಳಿತ್ತು. ಆದರೆ ಇತ್ತೀಚೆಗೆ ಸದನದಲ್ಲಿ ಸಚಿವರು ಸರ್ಕಾರದ ಹಣವನ್ನ ಪಡೆಯಲು ಫಲಾನುಭವಿಗಳು ಬೇಡ ಎನ್ನುತ್ತಿದ್ದಾರೆ ಎಂದು ಹೇಳಿದ್ದಾರೆ" ಎಂದರು.