ಬೆಂಗಳೂರು, ಫೆ.15(DaijiworldNews/PY): ಮನೆಯಲ್ಲಿ ಫ್ರಿಡ್ಜ್, ಬೈಕ್, ಟಿವಿ ಇದ್ದಲ್ಲಿ ಬಿಪಿಎಲ್ ಪಡಿತರ ಚೀಟಿ ರದ್ದು ಮಾಡಲಾಗುವುದು ಎಂದು ಹೇಳಿದ್ದ ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಅವರ ಹೇಳಿಕೆಗೆ ತಿರುಗೇಟು ನೀಡಿದ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರು, "ಸಾವಿಲ್ಲದ ಮನೆಯ ಸಾಸಿವೆ ಕಾಳು ತರಲು ಹೇಗೆ ಸಾಧ್ಯವಿಲ್ಲವೋ, ಇಂದು ಟಿವಿ ಇಲ್ಲದ ಮನೆಯನ್ನು ಹುಡುಕಲು ಅಸಾಧ್ಯ" ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ "ಅವರು, ಟಿವಿ, ಬೈಕ್ ಇದ್ದರೆ ಬಿಪಿಎಲ್ ಕಾರ್ಡ್ ರದ್ದು ಮಾಡುವ ಉಮೇಶ್ ಕತ್ತಿಯವರ ಹೇಳಿಕೆ ಬಡತನದ ಬದಲು ಬಡವರನ್ನೇ ನಿರ್ಮೂಲನ ಮಾಡುವ ಮನಸ್ಥಿತಿಯ ಪ್ರತೀಕ. ಸಾವಿಲ್ಲದ ಮನೆಯ ಸಾಸಿವೆ ಕಾಳು ತರಲು ಹೇಗೆ ಸಾಧ್ಯವಿಲ್ಲವೋ, ಇಂದು ಟಿವಿ ಇಲ್ಲದ ಮನೆಯನ್ನು ಹುಡಕಲು ಅಸಾಧ್ಯ. ಸರ್ಕಾರ ಬಿಪಿಎಲ್ ಕಾರ್ಡ್ ನೀಡುವ ಮಾನದಂಡ ಮೊದಲು ಬದಲಾಯಿಸಿಕೊಳ್ಳಲಿ" ಎಂದಿದ್ದಾರೆ.
"ಬಿಪಿಎಲ್ ಕಾರ್ಡ್ ನೀಡಲು ಕುಟುಂಬದ ಆದಾಯ ಮಾನದಂಡವಾಗಬೇಕೆ ಹೊರತು ಟಿವಿ ಬೈಕ್ಗಳಲ್ಲ. ಉಮೇಶ್ ಕತ್ತಿಯವರ ಹೇಳಿಕೆ ಈ ಸರ್ಕಾರಕ್ಕೆ ಬಡವರ ಮೇಲೆ ಎಷ್ಟು ಕಾಳಜಿ ಇದೆ ಎಂದು ತೋರಿಸುತ್ತಿದೆ. ಬಡವರ ಸವಲತ್ತು ಕಿತ್ತುಕೊಳ್ಳಲು ಸರ್ಕಾರವೇ ಹೂಡುತ್ತಿರುವ ಹುನ್ನಾರವಿದು. ಬಿಜೆಪಿ ತಮ್ಮದು ಬಡವರ ಪರ ಸರ್ಕಾರ ಎಂದು ಹೇಳಲು ಯಾವ ನಾಲಿಗೆಯಿದೆ?" ಎಂದು ಪ್ರಶ್ನಿಸಿದ್ದಾರೆ.
"ಮನೆಯಲ್ಲಿ ಫ್ರಿಡ್ಜ್, ಬೈಕ್, ಟಿವಿ ಇದ್ದಲ್ಲಿ ಬಿಪಿಎಲ್ ಪಡಿತರ ಚೀಟಿ ರದ್ದು ಮಾಡಲಾಗುವುದು" ಎಂದು ಉಮೇಶ್ ಕತ್ತಿ ಹೇಳಿದ್ದರು.
"ಐದು ಎಕ್ರೆಗಿಂತ ಅಧಿಕ ಜಮೀನು ಸೇರಿದಂತೆ ಮನೆಯಲ್ಲಿ ಟಿವಿ, ಫ್ರಿಡ್ಜ್ ಹಾಗೂ ಬೈಕ್ ಇದ್ದವರ ಪಡಿತರ ಚೀಟಿಯನ್ನು ರದ್ದು ಮಾಡಲಾಗುತ್ತದೆ. ಇವುಗಳ ಪೈಕಿ ಯಾವುದಾದರು ಒಂದು ಇದ್ದಲ್ಲಿ ಬಿಪಿಎಲ್ ಕಾರ್ಡ್ ಅನ್ನು ರದ್ದು ಮಾಡಲಾಗುತ್ತದೆ. ಇಂಥವರಿಗೆ ತಮ್ಮ ಬಿಪಿಎಲ್ ಕಾರ್ಡ್ ಅನ್ನು ಹಿಂದಿರುಗಿಸಲು ಮಾರ್ಚ್ ಅಂತ್ಯದವರೆಗೆ ಸಮಯಾವಕಾಶ ನೀಡಲಾಗುತ್ತದೆ" ಎಂದಿದ್ದರು.
"ಸರ್ಕಾರ ಎಪ್ರಿಲ್ ತಿಂಗಳ ನಂತರ ಕಾರ್ಡ್ ಹೊಂದಿರುವವರ ಪರಿಶೀಲನೆ ನಡೆಸಲಿದೆ. ಈ ಸಂದರ್ಭ ಎಲ್ಲಾ ಸೌಲಭ್ಯವಿದ್ದು, ಬಿಪಿಎಲ್ ಕಾರ್ಡ್ ಹೊಂದಿದ್ದಲ್ಲಿ, ಅವರಿಗೆ ದಂಡದೊಂದಿಗೆ ಶಿಕ್ಷೆಯೂ ನೀಡಲಾಗುತ್ತದೆ" ಎಂದು ತಿಳಿಸಿದ್ದರು.