ರಾಯಚೂರು,ಫೆ.15 (DaijiworldNews/HR): "ನಮ್ಮ ಪಕ್ಷದಲ್ಲಿ ಯಾವ ಶಾಸಕರಿಗೂ ಅಸಮಾಧಾನವಿಲ್ಲ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೀಗೆಲ್ಲ ಮಾತನಾಡುವುದನ್ನು ನಿಲ್ಲಿಸಬೇಕು" ಎಂದು ನಗರ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈಗಾಗಲೇ ಬಿಜೆಪಿಯು ಯತ್ನಾಳ್ ಅವರಿಗೆ ನೋಟಿಸ್ ನೀಡಿದ್ದು, ಪಕ್ಷದಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳುತ್ತಿರುವ ಅವರು ಮುಂದಿನ ದಿನಗಳಲ್ಲಿ ಹೀಗೆ ಮಾತಾಡಿ ನೋಡಲಿ. ಏನಾಗುತ್ತದೆ ಎಂದು ಗೊತ್ತಾಗುತ್ತದೆ. ನಮ್ಮದು ಶಿಸ್ತಿನ ಪಕ್ಷ" ಎಂದರು.
ಇನ್ನು "ಬಿಪಿಎಲ್ ಕಾರ್ಡಿಗೆ ಟಿವಿ, ಫ್ರಿಡ್ಜ್ ಹಾಗೂ ಬೈಕ್ ಮಾನದಂಡ ಆಗಬಾರದು, ನಾನು ಆ ವಿಷಯವನ್ನ ಮಾಧ್ಯಮಗಳಲ್ಲಿ ನೋಡಿದ್ದೇನೆ. ನನಗೆ ಅದರ ಬಗ್ಗೆ ಸಮಗ್ರ ಮಾಹಿತಿ ಇಲ್ಲ. ಆದರೆ ಮೊಬೈಲ್, ಟಿವಿ ಹಾಗೂ ಬೈಕ್ ಜೀವನದ ಭಾಗವಾಗಿದೆ. ಹಾಗಾಗಿ ಈ ರೀತಿಯ ಮಾನದಂಡಗಳು ಸರಿಯಲ್ಲ, ಇದರ ಬಗ್ಗೆ ನಾನು ವಿರೋಧಿಸುತ್ತೇನೆ" ಎಂದು ಹೇಳಿದ್ದಾರೆ.