ನವದೆಹಲಿ, ಫೆ.15 (DaijiworldNews/HR): ಕೃಷಿ ಕಾಯ್ದೆ ವಿರುದ್ದದ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಟೂಲ್ಕಿಟ್ ಸಿದ್ಧಪಡಿಸಿದ ಪ್ರಕರಣದಲ್ಲಿ ಬಂಧಿತರಾಗಿರುವ ಸಾಮಾಜಿಕ ಹೋರಾಟಗಾರ್ತಿ ದಿಶಾ ರವಿ ಅವರ ಬಂಧನವನ್ನು ಖಂಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, "ಪ್ರಜಾಪ್ರಭುತ್ವ ಮೇಲೆ ಹಿಂದೆಂದೂ ಕಂಡಿಲ್ಲದ ರೀತಿಯ ದಾಳಿಯಾಗಿದೆ" ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, " 21 ವರ್ಷದ ದಿಶಾ ರವಿ ಬಂಧನವು ಪ್ರಜಾಪ್ರಭುತ್ವ ಮೇಲೆ ಹಿಂದೆಂದೂ ಕಂಡಿಲ್ಲದ ರೀತಿಯ ದಾಳಿಯಾಗಿದ್ದು, ನಮ್ಮ ರೈತರಿಗೆ ಬೆಂಬಲ ನೀಡುವುದು ಅಪರಾಧವಲ್ಲ" ಎಂದು ಉಲ್ಲೇಖಿಸಿದರು.
ಕೃಷಿ ಮಸೂದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಹೇಗೆ ಬೆಂಬಲಿಸಬೇಕು ಎಂಬುದನ್ನು ವಿವರಿಸುವ ಟೂಲ್ಕಿಟ್ ಸಿದ್ಧಪಡಿಸಿದ ಆರೋಪದಲ್ಲಿ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತೆ ದಿಶಾ ರವಿ ಅವರನ್ನು ಬಂಧಿಸಲಾಗಿದೆ".
ಇನ್ನು ದಿಶಾ ಸಿದ್ಧಪಡಿಸಿರುವ ಟ್ವಿಟರ್ ಟೂಲ್ಕಿಟ್ ರೈತರ ಪ್ರತಿಭಟನೆಯನ್ನು ಉತ್ತೇಜಿಸಿದ್ದು, ಬಳಿಕ ಅದನ್ನು ತಿದ್ದಿದ್ದರು ಎಂದು ಆರೋಪಿಸಲಾಗಿದ್ದು, ದಿಶಾ ರವಿ ವಿರುದ್ಧ ದೇಶದ್ರೋಹ, ಜನರ ನಡುವೆ ದ್ವೇಷಕ್ಕೆ ಕುಮ್ಮಕ್ಕು ಮತ್ತು ಅಪರಾಧ ಒಳಸಂಚಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.