ವಡೋದರ, ಫೆ.15(DaijiworldNews/PY): ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ಸಂದರ್ಭ ಗುಜರಾತ್ ಸಿಎಂ ವಿಜಯ್ ರೂಪಾಣಿ ಅವರು ಕುಸಿದು ಬಿದ್ದ ಘಟನೆ ಫೆ.14ರ ರವಿವಾರ ನಡೆದಿದೆ.
ವಿಜಯ್ ರೂಪಾಣಿ ಅವರಿಗೆ ಕೂಡಲೇ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.
ವಡೋದರ ನಿಜಾಂಪುರದಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆಯ ಸಮಾವೇಶದಲ್ಲಿ ಅವರು ಭಾಷಣ ಮಾಡುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ವಿಜಯ್ ರೂಪಾಣಿ ಅವರು ಕುಸಿದು ಬಿದ್ದ ಸಂದರ್ಭ ಅವರಿಗೆ ಕೂಡಲೇ ವೇದಿಕೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಅವರೇ ಸ್ವತಃ ವೇದಿಕೆಯಿಮದ ಇಳಿದು ತೆರಳಿದ್ದಾರೆ. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಹಮದಾಬಾದ್ಗೆ ಕರೆದೊಯ್ಯಲಾಗಿದೆ.
"ಎರಡು ದಿನಗಳಿಂದ ವಿಜಯ್ ರೂಪಾಣಿ ಅವರ ಆರೋಗ್ಯ ಉತ್ತಮವಾಗಿರಲಿಲ್ಲ. ಆದರೆ ಶನಿವಾರ ಜಾಂಮ್ ನಗರ ಹಾಗೂ ರವಿವಾರ ವಡೋದರಲ್ಲಿನ ಸಾರ್ವಜನಿಕ ಸಭೆಗಳನ್ನು ಅವರು ರದ್ದು ಮಾಡುವ ಬದಲಾಗಿ ಸಭೆಗಳಲ್ಲಿ ಭಾಗವಹಿಸಿದ್ದರು" ಎಂದು ಬಿಜೆಪಿ ನಾಯಕ ಭರತ್ ದಾಂಗೆರ್ ತಿಳಿಸಿದ್ದಾರೆ.
"ಸಿಎಂ ಅವರು ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದ ಸಂದರ್ಭ ಕುಸಿದುಬಿದ್ದಿದ್ದಾರೆ. ಆ ವೇಳೆ ಅವರನ್ನು ಭದ್ರತಾ ಸಿಬ್ಬಂದಿಗಳು ಹಿಡಿದುಕೊಂಡಿದ್ದಾರೆ. ಕೂಡಲೇ ಅವರಿಗೆ ಪ್ರಥಮ ಚಿಕಿತ್ಸೆ ನೀಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅಹಮದಾಬಾದ್ಗೆ ಕರೆದೊಯ್ಯಲು ವಿಮಾನ ನಿಲ್ದಾಣಕ್ಕೆ ಸಾಗಿಸಲಾಯಿತು" ಎಂದಿದ್ದಾರೆ.
"ವಿಜಯ್ ರೂಪಾಣಿ ಅವರನ್ನು 24 ಗಂಟೆಗಳ ನಿಗಾದಲ್ಲಿ ಇಡಲಾಗಿದ್ದು, ಅವರಿಗೆ ಎಲ್ಲಾ ಪರೀಕ್ಷೆಗಳನ್ನು ನಡೆಸಲಾಗಿದೆ. ಸಿಎಂ ಅವರಿಗೆ ವಿಶ್ರಾಂತಿಯ ಅಗತ್ಯವಿದೆ" ಎಂದು ಅಹಮದಾಬಾದ್ ನ ಯು.ಎನ್. ಆಸ್ಪತ್ರೆ ವೈದ್ಯ ಆರ್.ಕೆ.ಪಟೇಲ್ ತಿಳಿಸಿದ್ದಾರೆ.