ಬೆಳಗಾವಿ, ಫೆ.15(DaijiworldNews/PY): "ಮನೆಯಲ್ಲಿ ಫ್ರಿಡ್ಜ್, ಬೈಕ್, ಟಿವಿ ಇದ್ದಲ್ಲಿ ಬಿಪಿಎಲ್ ಪಡಿತರ ಚೀಟಿ ರದ್ದು ಮಾಡಲಾಗುವುದು" ಎಂದು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಐದು ಎಕ್ರೆಗಿಂತ ಅಧಿಕ ಜಮೀನು ಸೇರಿದಂತೆ ಮನೆಯಲ್ಲಿ ಟಿವಿ, ಫ್ರಿಡ್ಜ್ ಹಾಗೂ ಬೈಕ್ ಇದ್ದವರ ಪಡಿತರ ಚೀಟಿಯನ್ನು ರದ್ದು ಮಾಡಲಾಗುತ್ತದೆ. ಇವುಗಳ ಪೈಕಿ ಯಾವುದಾದರು ಒಂದು ಇದ್ದಲ್ಲಿ ಬಿಪಿಎಲ್ ಕಾರ್ಡ್ ಅನ್ನು ರದ್ದು ಮಾಡಲಾಗುತ್ತದೆ. ಇಂಥವರಿಗೆ ತಮ್ಮ ಬಿಪಿಎಲ್ ಕಾರ್ಡ್ ಅನ್ನು ಹಿಂದಿರುಗಿಸಲು ಮಾರ್ಚ್ ಅಂತ್ಯದವರೆಗೆ ಸಮಯಾವಕಾಶ ನೀಡಲಾಗುತ್ತದೆ" ಎಂದಿದ್ದಾರೆ.
"ಸರ್ಕಾರ ಎಪ್ರಿಲ್ ತಿಂಗಳ ನಂತರ ಕಾರ್ಡ್ ಹೊಂದಿರುವವರ ಪರಿಶೀಲನೆ ನಡೆಸಲಿದೆ. ಈ ಸಂದರ್ಭ ಎಲ್ಲಾ ಸೌಲಭ್ಯವಿದ್ದು, ಬಿಪಿಎಲ್ ಕಾರ್ಡ್ ಹೊಂದಿದ್ದಲ್ಲಿ, ಅವರಿಗೆ ದಂಡದೊಂದಿಗೆ ಶಿಕ್ಷೆಯೂ ನೀಡಲಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ.
"ಅರೆ ಸರ್ಕಾರಿ ಅಧಿಕಾರಿಗಳು ಸೇರಿದಂತೆ ಸರ್ಕಾರಿ ಅಧಿಕಾರಿಗಳು 1.20 ಲಕ್ಷ ಆದಾಯ ಇರುವವರು ಬಿಪಿಎಲ್ ಕಾರ್ಡ್ ಹೊಂದಿರಲು ಸಾಧ್ಯವೇ ಇಲ್ಲ. ಆದರೂ ಕೂಡಾ ಕೆಲವು ಅಧಿಕಾರಿಗಳು ಕಾರ್ಡ್ ಹೊಂದಿರುವ ಬಗ್ಗೆ ದೂರುಗಳು ಬಂದಿವೆ. ಈ ನಿಟ್ಟಿನಲ್ಲಿ ಈಗಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುತ್ತದೆ" ಎಂದಿದ್ದಾರೆ.