ಗುವಾಹಟಿ, ಫೆ.15(DaijiworldNews/PY): "ನೇಪಾಳ ಹಾಗೂ ಶ್ರೀಲಂಕಾದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ಸರ್ಕಾರ ಸ್ಥಾಪಿಸುವ ಯೋಜನೆಯನ್ನು ಹೊಂದಿದ್ದಾರೆ" ಎಂದು ತ್ರಿಪುರದ ಬಿಜೆಪಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ತಿಳಿಸಿದ್ದಾರೆ.
ಅಗರ್ತಲಾದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಬಿಜೆಪಿ ಪಕ್ಷವನ್ನು ದೇಶದ ಎಲ್ಲಾ ರಾಜ್ಯಗಳಲ್ಲೂ ಮಾತ್ರವಲ್ಲದೇ, ನೆರೆಯ ರಾಷ್ಟ್ರಗಳಲ್ಲೂ ಕೂಡಾ ಸಂಘಟಿಸುವ ಯೋಜನೆ ಇದೆ" ಎಂದಿದ್ದಾರೆ.
"2018ರಲ್ಲಿ ತ್ರಿಪುರಾ ವಿಧಾನಸಭೆ ಚುನಾವಣೆಗೆ ತಯಾರು ನಡೆಸುತ್ತಿದ್ದ ವೇಳೆ ಆಗ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ ಅವರು ಬಿಜೆಪಿಯು ದೇಶದ ಎಲ್ಲಾ ರಾಜ್ಯಗಳಲ್ಲಿ ಗೆದ್ದುಬಂದ ನಂತರ ವಿದೇಶಗಳಲ್ಲಿಯೂ ಪಕ್ಷವನ್ನು ವಿಸ್ತರಿಸುವ ವಿಚಾರದ ಬಗ್ಗೆ ನಮ್ಮೊಂದಿಗೆ ಮಾತನಾಡಿದ್ದರು" ಎಂದು ತಿಳಿಸಿದ್ದಾರೆ.
"ವಿಧಾನಸಭೆ ಚುನಾವಣೆಯ ವೇಳೆ ಇಲ್ಲಿ ಅತಿಥಿ ಗೃಹದಲ್ಲಿ ಅಜಯ್ ಜಮ್ವಾಲ್ ಅವರು ಹಲವಾರು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ರಚಿಸಿದೆ ಎಂದಿದ್ದರು. ಇದಕ್ಕೆ ಉತ್ತರಿಸಿದ್ದ ಅಮಿತ್ ಶಾ ಅವರು, ನಾವು ಶ್ರೀಲಂಕಾ ಹಾಗೂ ನೇಪಾಳದಲ್ಲಿ ಅಧಿಕಾರ ಹೊಂದಬೇಕು ಎಂದು ತಿಳಿಸಿದ್ದರು" ಎಂದು ಹೇಳಿದ್ದಾರೆ.
ಬಿಪ್ಲಬ್ ಕುಮಾರ್ ದೇಬ್ ಅವರ ಹೇಳಿಕೆಗೆ ಬಿಜೆಪಿ ಹಾಗೂ ಇತರೆ ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.