ಇಂದೋರ್, ಫೆ.15(DaijiworldNews/PY): "ರೈತರ ಬಿಕ್ಕಟ್ಟಿಗೆ ಕೇಂದ್ರ ಸರ್ಕಾರದ ಮೊಂಡುತನವೇ ಕಾರಣ" ಎಂದು ಸಂಯುಕ್ತ ಕಿಸಾನ್ ಮೋರ್ಚಾ ಸಮನ್ವಯ ಸಮಿತಿ ಸದಸ್ಯ ಶಿವಕುಮಾರ್ ಆರೋಪಿಸಿದ್ದಾರೆ.
"ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ದ ದೆಹಲಿ ಗಡಿಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಜೊತೆ ಮಾತುಕತೆ ಮಾಡಲಿದ್ದೇವೆ ಎಂದು ಪ್ರಧಾನಿ ಮೋದಿ ಅವರು ಸಂಸತ್ತಿನಲ್ಲಿ ಭರವಸೆ ಕೊಟ್ಟಿದ್ದರೂ ಕೂಡಾ ಮಾತುಕತೆಗೆ ಈವರೆಗೆ ದಿನಾಂಕ ನಿಗದಿ ಮಾಡಿಲ್ಲ" ಎಂದು ಎಸ್ಕೆಎಂ ಹೇಳಿದೆ.
40 ರೈತ ಸಂಘಟನೆಗಳ ಒಕ್ಕೂಟವಾಗಿರುವ ಸಂಯುಕ್ತ ಕಿಸಾನ್ ಮೋರ್ಚಾವು, ರೈತರ ಪ್ರತಿಭಟನೆಯನ್ನು ಮುನ್ನಡೆಸುತ್ತಿದೆ.
"ಕೇಂದ್ರದ ಮೊಂಡುತನವೇ ರೈತರ ಬಿಕ್ಕಟ್ಟಿಗೆ ಕಾರಣವಾಗಿದೆ. ಇಲ್ಲಿಯವರೆಗೆ ನಾವು 12 ಸುತ್ತಿನ ಮಾತುಕತೆಯನ್ನು ನಡೆಸಿದ್ದೇವೆ. ಆದರೆ, ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಕಾನೂನು ಖಾತ್ರಿಗೊಳಿಸಲು ಇನ್ನೂ ಕೂಡಾ ತಯಾರಿಲ್ಲ" ಎಂದಿದ್ದಾರೆ.
"ಸಂಸತ್ತಿನಲ್ಲಿ ಪ್ರಧಾನಿ ಮೋದಿ ಅವರು ರೈತರ ಜೊತೆ ಮಾತುಕತೆ ನಡೆಸಲು ಸರ್ಕಾರ ಬದ್ದ ಎಂದು ತಿಳಿಸಿದ್ದಾರೆ. ಆದರೆ, ಇನ್ನೂ ಕೂಡಾ ಮಾತುಕತೆಗೆ ದಿನಾಂಕ ನಿಗದಿ ಮಾಡಿಲ್ಲ" ಎಂದು ಆರೋಪಿಸಿದ್ದಾರೆ.
"ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಗಳು ರೈತರ ಪಾಲಿಗೆ ಮರಣ ಶಾಸನವಾಗಿದ್ದು, ರೈತರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದ್ದರೆ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು" ಎಂದಿದ್ದಾರೆ.
ಈ ನಡುವೆ ರೈತರ ಪ್ರತಿಭಟನೆಯನ್ನು ದೇಶದೆಲ್ಲೆಡೆ ವ್ಯಾಪಿಸಲು ತೀರ್ಮಾನ ಮಾಡಿದ್ದು, ಹಲವು ಕಡೆ ಮಹಾ ಪಂಚಾಯಿತಿಗಳನ್ನು ಆಯೋಜಿಸಲು ತೀರ್ಮಾನ ಮಾಡಿದ್ದಾರೆ. ಈ ಸಭೆಯಲ್ಲಿ ಪ್ರಮುಖ ರೈತ ಮುಖಂಡರು ಪಾಲ್ಗೊಳ್ಳಲಿದ್ದಾರೆ.