ಬೆಳಗಾವಿ, ಫೆ.14 (DaijiworldNews/MB) : ''ತಾನು ಮನಸ್ಸು ಮಾಡಿದರೆ 24 ಗಂಟೆಯೊಳಗೆ ಕಾಂಗ್ರೆಸ್ ಪಕ್ಷದ ಮಹಾನ್ ಐದು ಶಾಸಕರಿಂದ ರಾಜೀನಾಮೆ ಕೊಡಿಸಿ ಬಿಜೆಪಿಗೆ ಸೇರಿಸಬಲ್ಲೆ'' ಎಂದು ಹೇಳಿರುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು, ''ಆ ಶಾಸಕರುಗಳ ಹೆಸರು ಕೇಳಿದರೆ ನೀವು ಶಾಕ್ ಆಗುತ್ತೀರಾ'' ಎಂದು ಕೂಡಾ ಹೇಳಿದ್ದಾರೆ.
ರವಿವಾರ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಯ್ಕೆಯಾಗಿರುವ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗಾಗಿ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ''ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮತ್ತೊಮ್ಮೆ ಕಮಲ ಅರಳಬೇಕು. ಅದಕ್ಕಾಗಿ ಎಲ್ಲರೂ ಸಂಘಟಿತರಾಗಿ ಕಾರ್ಯ ನಿರ್ವಹಿಸಬೇಕು'' ಎಂದು ಹೇಳಿದರು.
''ಸಿದ್ದರಾಮಯ್ಯನವರು ಈಗಲೂ ನಮ್ಮ ನಾಯಕರು. ನಾನು ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ಅವರೊಂದಿಗೆ ಮಾತನಾಡುತ್ತೇನೆ. ಆದರೆ ಪಕ್ಷದ ವಿಚಾರದಲ್ಲಿ ನಾನು ಬಿಜೆಪಿ'' ಎಂದರು.
''20 ವರ್ಷ ಕಾಂಗ್ರೆಸ್ನಲ್ಲಿ ನನ್ನನ್ನು ಮೂಲೆ ಗುಂಪಾಗಿಸಲಾಗಿದ್ದು, ಆದರೆ, ಬಿಜೆಪಿಯಲ್ಲಿ ಅಮಿತ್ ಶಾನಿಂದ ಯಡಿಯೂರಪ್ಪವರೆಗೆ ಎಲ್ಲರೂ ಕರೆದು ಪ್ರೀತಿಯಿಂದ ಮಾತನಾಡಿಸುತ್ತಾರೆ. ನಾವು ಎಲ್ಲ 17 ಶಾಸಕರೂ ಇಲ್ಲೇ ಇರುತ್ತೇವೆ'' ಎಂದೂ ಹೇಳಿದರು.