ನವದೆಹಲಿ, ಫೆ.14 (DaijiworldNews/MB) : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವಾಗ ಟೋಲ್ ಪ್ಲಾಜಾಗಳಲ್ಲಿ ಶುಲ್ಕ ಪಾವತಿಸಲು ಸೋಮವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಫಾಸ್ಟ್ಯಾಗ್ ಬಳಸುವುದು ಕಡ್ಡಾಯವಾಗಲಿದೆ. ಫಾಸ್ಟ್ಯಾಗ್ ಇಲ್ಲದಿದ್ದರೆ ಅಂಥ ವಾಹನಗಳ ಮಾಲೀಕರು, ಚಾಲಕರು ನಿಗದಿತ ಶುಲ್ಕದ ದುಪ್ಪಟ್ಟು ಮೊತ್ತವನ್ನು ಪಾವತಿ ಮಾಡಬೇಕಾಗುತ್ತದೆ ಎಂದು ಕೇಂದ್ರ ಭೂ ಸಾರಿಗೆ ಸಚಿವಾಲಯವು ತಿಳಿಸಿದೆ.
ಶುಲ್ಕ ಸಂಗ್ರಹದ ವ್ಯಾಪ್ತಿಗೆ ಬರುವ ಎಲ್ಲ ಹೆದ್ದಾರಿ, ರಸ್ತೆಗಳನ್ನು ಫಾಸ್ಟ್ಯಾಗ್ ಮಾರ್ಗ ಎಂದು ಪರಿಗಣಿಸಲಾಗುವುದು ಎಂದು ಕೂಡಾ ಸಚಿವಾಲಯ ತಿಳಿಸಿದೆ.
ಜನವರಿ 1ರಿಂದಲೇ ಫಾಸ್ಟ್ಯಾಗ್ ಬಳಸುವುದನ್ನು ಕಡ್ಡಾಯ ಮಾಡಲಾಗಿತ್ತು. ಬಳಿಕ ಅದನ್ನು ಫೆಬ್ರವರಿ 15ಕ್ಕೆ ಮುಂದೂಡಲಾಗಿತ್ತು. ಫಾಸ್ಟ್ಯಾಗ್ ಬಳಕೆ ಕಡ್ಡಾಯವಾಗುವಂತೆ ಎಲ್ಲ ಅಗತ್ಯ ಕ್ರಮಗಳನ್ನು ವಹಿಸಬೇಕು ಎಂದೂ ಸಚಿವಾಲಯವು, ರಾಜ್ಯಗಳ ಸಂಬಂಧಿತ ಇಲಾಖೆಗಳಿಗೆ ಸೂಚಿಸಿತ್ತು.
ಎನ್ಎಚ್ಎಐ ಮೂಲಗಳ ಪ್ರಕಾರ, ಇನ್ನೂ ಎರಡು ಕೋಟಿಯಷ್ಟು ನಾಲ್ಕು ಚಕ್ರ ಹಾಗೂ ಭಾರಿ ವಾಹನಗಳಿಗೆ ಫಾಸ್ಟ್ಯಾಗ್ ಅಳವಡಿಸಬೇಕಾಗಿದೆ.