ತುಮಕೂರು,ಫೆ. 14 (DaijiworldNews/HR): "ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ನನಗೆ ನೋಟಿಸ್ ಕೊಟ್ಟಿದ್ದಾರೆಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಆದರೆ ನನಗೆ ಈವರೆಗೂ ಯಾವುದೇ ನೋಟಿಸ್ ಬಂದಿಲ್ಲ" ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನನಗೆ ನೋಟಿಸ್ ಬಂದಿದೆ ಎಂದು ಪಕ್ಷದ ಉಪಾಧ್ಯಕ್ಷ ವಿಜಯೇಂದ್ರ ಅವರಿಗೆ ಹೇಗೆ ಗೊತ್ತಾಯಿತು? ಎಂದು ಪ್ರಶ್ನಿಸಿದ ಅವರು ಯಾರ ಬಳಿಯೂ ನೋಟಿಸ್ ಪತ್ರ ಇಲ್ಲ. ನೋಟಿಸ್ ನೀಡಿರುವುದಾಗಿ ಹೇಳಿಕೆ ನೀಡಿ ಮೂರು ದಿನವಾಗಿದೆ. ಎಲ್ಲಿಯೂ ನೋಟಿಸ್ ಕಾಣಿಸುತ್ತಿಲ್ಲ" ಎಂದು ವ್ಯಂಗ್ಯಮಾಡಿದ್ದಾರೆ.
ಇನ್ನು ನನ್ನನ್ನು ಹೆದರಿಸುವ ಸಲುವಾಗಿ ನೋಟಿಸ್ ಕೊಡಲಾಗಿದ್ದು, ಅದಕ್ಕೆ ತಲೆಕೆಡಿಸಿಕೊಳ್ಳಬೇಡಿ ಎಂದು ಸಚಿವರೊಬ್ಬರು ದೂರವಾಣಿ ಕರೆಮಾಡಿ ನನಗೆ ಹೇಳಿದ್ದಾರೆ. ಫೆ. 21ರ ನಂತರ ಕೇಂದ್ರ ನಾಯಕರು ನೋಟಿಸ್ ವಾಪಸ್ ಪಡೆಯುವುದಾಗಿ ಅವರು ತಿಳಿಸಿದ್ದಾರೆ. ಯಾರ ಬೆದರಿಕೆಗೂ ಅಂಜುವುದಿಲ್ಲ" ಎಂದು ಹೇಳಿದ್ದಾರೆ.