ಬೆಂಗಳೂರು, ಫೆ.14 (DaijiworldNews/MB) : ''ಶ್ರಮಪಟ್ಟಲ್ಲಿ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ 120 ಸೀಟು ತನ್ನದಾಗಿಸಬಹುದು'' ಎಂದು ಜೆಡಿಎಸ್ ಶಾಸಕ ಬಂಡೆಪ್ಪ ಕಾಶಂಪೂರ್ ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ''ಕೆಲವರು ಜೆಡಿಎಸ್ ಎಲ್ಲಿದೆ ಎಂದು ಪ್ರಶ್ನಿಸುತ್ತಾರೆ. ಬೀದರ್ನಿಂದ ಚಾಮರಾಜನಗರದವರೆಗೂ ಜೆಡಿಎಸ್ ಇರುವುದೇ ಅವರ ಪ್ರಶ್ನೆಗೆ ಸರಿಯಾದ ಉತ್ತರ'' ಎಂದು ಕಾಂಗ್ರೆಸ್- ಬಿಜೆಪಿಗೆ ಟಾಂಗ್ ನೀಡಿದರು.
''ಕಾಂಗ್ರೆಸ್ನವರು ಎಲ್ಲಾ ಭಾಗ್ಯವನ್ನು ತಂದು ಈಗ ಎಲ್ಲಿದ್ದಾರೆ ಎಂದು ಪ್ರಶ್ನಿಸಿದ ಅವರು, ಅವರು 130 ರಿಂದ 78 ಸೀಟ್ಗೆ ಇಳಿದಿದ್ದಾರೆ'' ಎಂದು ಹೇಳಿದರು.
ಇನ್ನು, ''ಬಿಜೆಪಿ ಅಧಿಕಾರದಲ್ಲಿ ಇರುವಾಗಲೂ ಯಾವುದೇ ಕಾರ್ಯಗಳು ಆಗುತ್ತಿಲ್ಲ. ಬಿಜೆಪಿ ಶಾಸಕರೇ ನಮ್ಮ ಕ್ಷೇತ್ರಕ್ಕೆ ಸರ್ಕಾರ ಹಣ ನೀಡುತ್ತಿಲ್ಲ ಎಂದು ದೂರುತ್ತಿದ್ದಾರೆ'' ಎಂದರು.
ಹಾಗೆಯೇ ರೈತರ ವಿಚಾರವಾಗಿ ಮಾತನಾಡಿದ ಬಂಡೆಪ್ಪ ಕಾಶಂಪೂರ್ ಅವರು, ''ರೈತರ ಬಗ್ಗೆ ಮಾತನಾಡುವವರು ಯಾರಾದರೂ ಇದ್ದರೆ, ಅದು ದೇವೇಗೌಡರು ಮಾತ್ರ. ಖುದ್ದು ಪ್ರಧಾನಿಯವರೇ ಈ ವಿಚಾರದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ'' ಎಂದು ಹೇಳಿದರು.