ದಾವಣಗೆರೆ, ಫೆ.14 (DaijiworldNews/PY): "ವಿವಿಧ ಸಮುದಾಯಗಳ ಸ್ವಾಮಿಗಳು ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟ ನ್ಯಾಯಯುತವಾದುದು, ಯಾವ ರೀತಿಯಾಗಿ ಅದನ್ನು ಈಡೇರಿಸಬೇಕು ಎನ್ನುವ ಬಗ್ಗೆ ಮಾತ್ರ ಚರ್ಚೆ ನಡೆಸಬೇಕಿದೆ" ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ರವಿವಾರ ಹೊನ್ನಾಳಿ ತಾಲೂಕಿನ ಸೂರಗೊಂಡನಕೊಪ್ಪದ ಭಾಯಾಗಡ್ನಲ್ಲಿ ನಡೆದ ಸಂತ ಸೇವಾಲಾಲ್ರ 282ನೇ ಜಯಂತ್ಯೋತ್ಸವ ಕಾರ್ಯಕ್ರಮದ ಉದ್ಘಾಟನೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮೀಸಲಾತಿ ವಿಚಾರವನ್ನು ಯಾವ ರೀತಿಯಾಗಿ ಈಡೇರಿಸಬೇಕು ಎನ್ನುವ ಬಗ್ಗೆ ಮಾತ್ರವೇ ಚರ್ಚೆ ನಡೆಸಬೇಕಿದೆ" ಎಂದರು.
"ಹೋರಾಟನಿರತ ಎಲ್ಲಾ ಸ್ವಾಮೀಜಿಗಳ ಈಡೇರಿಕೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು. ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು. ಯಾವ ಸ್ವಾಮೀಜಿಯವರಿಗೂ ಕೂಡಾ ಈ ಬಗ್ಗೆ ಆತಂಕ ಹಾಗೂ ಅನುಮಾನ ಬೇಡ" ಎಂದು ತಿಳಿಸಿದರು