ಶಿವಸಾಗರ, ಫೆ.14 (DaijiworldNews/MB) : ''ಬಿಜೆಪಿ ಮತ್ತು ಆರ್ಎಸ್ಎಸ್ ಅಸ್ಸಾಂ ಅನ್ನು ವಿಭಜಿಸುತ್ತಿದೆ'' ಎಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ''ತಮ್ಮ ಪಕ್ಷವು ಅಸ್ಸಾಂನಲ್ಲಿ ಅಧಿಕಾರಕ್ಕೆ ಬಂದರೆ ಎಂದಿಗೂ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತರುವುದಿಲ್ಲ'' ಎಂದು ಹೇಳಿದರು.
ಮಾರ್ಚ್-ಏಪ್ರಿಲ್ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಅಸ್ಸಾಂನಲ್ಲಿ ನಡೆದ ತಮ್ಮ ಮೊದಲ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಗಾಂಧಿ ಅವರು, ''ರಾಜ್ಯಕ್ಕೆ ತನ್ನದೇ ಆದ ಮುಖ್ಯಮಂತ್ರಿಗಳ ಅಗತ್ಯವಿದೆ. ಅವರು ರಾಜ್ಯದ ಜನರ ಧ್ವನಿ ಆಲಿಸುತ್ತಾರೆ'' ಎಂದರು.
"ಅಸ್ಸಾಂ ಒಪ್ಪಂದವು ಶಾಂತಿಯನ್ನು ತಂದಿದೆ. ಅದು ರಾಜ್ಯದ ರಕ್ಷಕವಾಗಿದೆ. ನಾನು ಮತ್ತು ನನ್ನ ಪಕ್ಷದ ಕಾರ್ಯಕರ್ತರು ಒಪ್ಪಂದದ ಪ್ರತಿಯೊಂದು ತತ್ವವನ್ನು ರಕ್ಷಿಸುತ್ತೇವೆ. ಅದರಲ್ಲಿ ಯಾವುದೇ ಬದಲಾವಣೆ ಕೂಡಾ ಮಾಡುವುದಿಲ್ಲ'' ಎಂದು ಆಶ್ವಾಸನೆ ನೀಡಿದರು.
''ಅಸ್ಸಾಂನಲ್ಲಿ ಅಕ್ರಮ ವಲಸೆ ಒಂದು ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ಮಾತುಕತೆಯ ಮೂಲಕ ಪರಿಹರಿಸುವ ಸಾಮರ್ಥ್ಯ ರಾಜ್ಯದ ಜನರಿಗೆ ಇದೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.
''ಅಸ್ಸಾಂ ಒಪ್ಪಂದದ ವಿಷಯದಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ ರಾಜ್ಯವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, ಅಸ್ಸಾಂ ವಿಭಜನೆಯಾದರೆ, ಪ್ರಧಾನಿ ನರೇಂದ್ರ ಮೋದಿ ಅಥವಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ, ಆದರೆ ಅಸ್ಸಾಂ ಮತ್ತು ಭಾರತದ ಉಳಿದ ಭಾಗಗಳ ಜನರ ಮೇಲೆ ಪರಿಣಾಮ ಬೀರುತ್ತದೆ'' ಎಂದು ಹೇಳಿದರು.
ವಿವಾದಾತ್ಮಕ ಸಿಎಎ ಕುರಿತು ಮಾತನಾಡಿದ ಅವರು, ''ತಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಯಾವುದೇ ಸಂದರ್ಭದಲ್ಲೂ ಈ ಕಾನೂನು ಜಾರಿಗೆ ತರಲ್ಲ'' ಎಂದು ಭರವಸೆ ನೀಡಿದರು.
''ಅಸ್ಸಾಂಗೆ ತಮ್ಮ ಸ್ವಂತ ಊರಿನ ಜನರೇ ಮುಖ್ಯಮಂತ್ರಿಯಾಗುವ ಅಗತ್ಯವಿದೆ. ಆ ಮುಖ್ಯಮಂತ್ರಿಗಳಾದರೆ ಈ ಜನರ ಸಮಸ್ಯೆಗಳನ್ನು ಆಲಿಸುತ್ತಾರೆ ಮತ್ತು ಅವುಗಳನ್ನು ಪರಿಹರಿಸಲು ಪ್ರಯತ್ನಿಸುತ್ತಾರೆ'' ಎಂದು ಹೇಳಿದರು.
"ರಿಮೋಟ್ ಕಂಟ್ರೋಲ್ ಟಿವಿಯನ್ನು ನಿರ್ವಹಿಸಬಲ್ಲದು ಆದರೆ ಸಿಎಂ ಅಲ್ಲ. ಪ್ರಸ್ತುತ ಮುಖ್ಯಮಂತ್ರಿ ಕೇಂದ್ರ ಹಾಗೂ ನಾಗ್ಪುರದ ಮಾತನ್ನು ಮಾತ್ರ ಕೇಳುತ್ತಾರೆ. ಅಸ್ಸಾಂ ಮತ್ತೆ ಈ ರೀತಿಯ ಸಿಎಂ ಪಡೆದರೆ ಜನರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಯುವಕರಿಗೆ ಉದ್ಯೋಗ ನೀಡುವವರು ಸಿಎಂ ಆಗಬೇಕು'' ಎಂದರು.
''ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಸ್ನೇಹಿತರಾದ ಉದ್ಯಮಿಗಳ ಪರವಾಗಿದ್ದಾರೆ'' ಎಂದು ಹೇಳಿರುವ ರಾಹುಲ್ ಗಾಂಧಿಯವರು ತಮ್ಮ ಹೊಸ ಘೋಷಣೆ ಮೂಲಕ ಕೇಂದ್ರ ಸರ್ಕಾರದ ಕಾಲೆಳೆದಿದ್ದಾರೆ. ''ಹಮ್ ದೋ, ಹಮಾರೆ ದದೋ, ಅಸ್ಸಾಂ ಕೇ ಲಿಯೇ ಹಮಾರೆ ಔರ್ ದೋ, ಔರ್ ಸಬ್ ಕುಚ್ ಲೂಟ್ ಲೋ''. (ನಾವಿಬ್ಬರು ನಮಗಿಬ್ಬರು, ಅಸ್ಸಾಂಗಾಗಿ ಮತ್ತಿಬ್ಬರು, ಎಲ್ಲವನ್ನೂ ಲೂಟಿ ಮಾಡಿ) ಎಂದು ಹೇಳಿದ್ದಾರೆ.