ಕೋಲ್ಕತ್ತ, ಫೆ. 14 (DaijiworldNews/HR): ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಬಿಜೆಪಿ ಮುಖಂಡ ಫಿರೋಜ್ ಕಮಲ್ ಗಾಜಿ ಅಲಿಯಾಸ್ ಬಾಬು ಮಾಸ್ಟರ್ ಅವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಗಾಜಿ ಗಂಭೀರ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
"ಬಸಂತಿ ಹೆದ್ದಾರಿಯಲ್ಲಿ ಕೋಲ್ಕತ್ತಕ್ಕೆ ತೆರಳುತ್ತಿದ್ದ ಗಾಜಿ ಅವರ ಮೇಲೆ ದುಷ್ಕರ್ಮಿಗಳು ಕಚ್ಚಾ ಬಾಂಬ್ಗಳ ಮೂಲಕ ದಾಳಿ ನಡೆಸಿದ್ದಾರೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಗಾಜಿ ಮತ್ತು ಅವರ ಚಾಲಕನಿಗೆ ಗಾಯಗಳಾಗಿದ್ದು, ಇಬ್ಬರನ್ನೂ ಕೋಲ್ಕತ್ತದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಜಿ ಅವರ ಜೀವಕ್ಕೆ ಅಪಾಯವಿಲ್ಲ, ಆದರೆ ಅವರನ್ನು ನಿಗಾದಲ್ಲಿ ಇಡಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಇನ್ನು ಫಿರೋಜ್ ಕಮಲ್ ಗಾಜಿ ಅವರು ಇತ್ತೀಚೆಗೆ ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದು, ಈ ದಾಳಿಯನ್ನು ಖಂಡಿಸಿರುವ ಬಿಜೆಪಿ ಹಿರಿಯ ಮುಖಂಡ ಸುವೆಂದು ಅಧಿಕಾರಿ, "ತೃಣಮೂಲ ಕಾಂಗ್ರೆಸ್ನ ಕ್ರಿಮಿನಲ್ಗಳ ಕೃತ್ಯವಿದು" ಎಂದು ಆರೋಪಿಸಿದ್ದಾರೆ.