ಚೆನ್ನೈ, ಫೆ.14 (DaijiworldNews/MB) : ''ಫೆಬ್ರವರಿ 14ರ ಈ ದಿನವನ್ನು ಯಾವ ಭಾರತೀಯನಿಗೂ ಮರೆಯಲಾಗದು'' ಎಂದು ಪ್ರಧಾನಿ ನರೇಂದ್ರ ಮೋದಿಯವರು, 2019ರ ಫೆಬ್ರವರಿ 14ರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ದಾಳಿಯನ್ನು ನೆನೆದರು.
ತಮಿಳು ನಾಡಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಅವರು ಪುಲ್ವಾಮಾ ದಾಳಿ ಬಗ್ಗೆ ಮಾತನಾಡಿದ್ದು, ''ಫೆಬ್ರವರಿ 14 ರ ದಿನವನ್ನು ಮರೆಯಲಾಗದು. ಜಮ್ಮು-ಕಾಶ್ಮೀರದ ಪುಲ್ವಾಮಾ ಮೇಲೆ 2019ರ ಫೆಬ್ರವರಿ 14ರಂದು ಉಗ್ರ ದಾಳಿ ನಡೆದಿದೆ. ಹುತಾತ್ಮರಾದ ಎಲ್ಲಾ ಯೋಧರಿಗೆ ಶ್ರದ್ಧಾಂಜಲಿ. ನನಗೆ ಸೇನಾಪಡೆಯ ಮೇಲೆ ಅಪಾರ ಹೆಮ್ಮೆಯಿದ್ದು, ನಮ್ಮ ಸೇನೆಯ ಈ ವೀರಗಾಥೆಯು ನಮ್ಮ ಹಲವು ತಲೆಮಾರುಗಳವರೆಗೂ ಯುವಪಡೆಗೆ ಸ್ಪೂರ್ತಿದಾಯಕವಾಗಲಿದೆ'' ಎಂದು ಹೇಳಿದರು.
ಇನ್ನು ತನ್ನ ಮಾತಿನ ವೇಳೆ ತಮಿಳುನಾಡಿನ ಖ್ಯಾತ ಲೇಖಕ ಮತ್ತು ಕವಿ ಸುಬ್ರಹ್ಮಣ್ಯ ಭಾರತಿ ಅವರ ಮಾತುಗಳನ್ನು ಉಲ್ಲೇಖ ಮಾಡಿದ ಪ್ರಧಾನಿ ಮೋದಿ, ''ಸುಬ್ರಹ್ಮಣ್ಯ ಭಾರತಿ ಅವರ ದೃಷ್ಟಿಕೋನದಿಂದ ಸ್ಪೂರ್ತಿ ಪಡೆದು ಭಾರತವಿಂದು ರಕ್ಷಣಾ ವಲಯದಲ್ಲಿ ಸ್ವಾವಲಂಬಿಯಾಗುವ ಪ್ರಯತ್ನ ಮಾಡಿದೆ'' ಎಂದು ಹೇಳಿದ್ದು ''ನಾವು ಶಸ್ತ್ರಾಸ್ತ್ರಗಳನ್ನು ತಯಾರಿಸೋಣ, ಪೇಪರ್ ಗಳನ್ನು ತಯಾರಿಸೋಣ, ಫ್ಯಾಕ್ಟರಿಗಳನ್ನು ಮಾಡೋಣ, ಶಾಲೆಗಳು, ವಾಹನಗಳು, ಹಡಗು ನಿರ್ಮಿಸೋಣ, ಸ್ವಾವಲಂಬಿಗಳಾಗೋಣ'' ಎಂಬ ಸುಬ್ರಹ್ಮಣ್ಯ ಭಾರತಿಯವರ ಮಾತನ್ನು ಉಲ್ಲೇಖಿಸಿದರು.
''ವಿಶ್ವದಲ್ಲೇ ಭಾರತವು ಅತ್ಯಂತ ಆಧುನಿಕ ಶಸ್ತ್ರಪಡೆಗಳನ್ನು ಹೊಂದಿದೆ ಎಂದು ಹೇಳಲು ಸಾಧ್ಯವಾಗುವಂತೆ ಭಾರತವನ್ನು ಉನ್ನತಿಗೆ ಏರಿಸಲು ನಮ್ಮ ಸರ್ಕಾರ ಬದ್ಧ. ಅದರೊಂದಿಗೆ ರಕ್ಷಣಾ ವಲಯದಲ್ಲಿ ಅತ್ಯಂತ ವೇಗವಾಗಿ ಸ್ವಾವಲಂಬನೆ ಸಾಧಿಸಲು ಒತ್ತು ನೀಡಲಾಗುತ್ತಿದೆ'' ಎಂದು ಹೇಳಿದರು.