ಬೆಂಗಳೂರು, ಫೆ. 14 (DaijiworldNews/HR): "ಕರ್ನಾಟಕದಲ್ಲಿ ಜೆಡಿಎಸ್ ಪಕ್ಷಕ್ಕೆ ಶಕ್ತಿ ಇದೆ. ಆದರೆ ಮುಖಂಡರಲ್ಲಿ ಏಕತೆಯ ಕೊರತೆ ಇದೆ" ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಈ ಕುರಿತು ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಪಕ್ಷದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, "ಪಕ್ಷಕ್ಕೆ ಬಲ ಬರಬೇಕಾದರೆ ನಾವೆಲ್ಲ ಒಗ್ಗಟ್ಟಿನಿಂದ ಹೋರಾಡಬೇಕು. ಮುಂಬರುವ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ವ್ಯತ್ಯಾಸಗಳು ಆದರೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಪಕ್ಷದ ಎಲ್ಲರೂ ಏಕತೆಯಿಂದ ಇರಬೇಕು" ಎಂದರು.
ಇನ್ನು "ಜೆಡಿಎಸ್ ಪಕ್ಷ ಉಳಿಯುವುದೇ ಇಲ್ಲ ಎಂದು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕೆಲವರು ಹೇಳಿದ್ದರು. ಆದರೆ ನಮ್ಮ ಪಕ್ಷದ ಶಕ್ತಿ ಕುಂದಿಲ್ಲ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಅದು ಸಾಬೀತಾಗಿದ್ದು, ಜೆಡಿಎಸ್ ನಲ್ಲಿ ನಿಷ್ಠರಾಗಿರುವ ಮುಖಂಡರು ಇನ್ನೂ ಇದ್ದಾರೆ" ಎಂದು ಹೇಳಿದ್ದಾರೆ.