ನವದೆಹಲಿ, ಫೆ.14 (DaijiworldNews/PY): ರೈತರ ಹೋರಾಟವನ್ನು ಬೆಂಬಲಿಸಿ ಟ್ವೀಟ್ ಮಾಡುವ ಸಂದರ್ಭ 18ರ ಹರೆಯದ ಸ್ವೀಡಿಷ್ ಸಾಮಾಜಿಕ ಹೋರಾಟಗಾರ್ತಿ ಗ್ರೆಟಾ ಥಂಬರ್ಗ್ ಹಂಚಿಕೊಂಡಿದ್ದ ಟೂಲ್ ಕಿಟ್ ಸಂಬಂಧ 21 ವರ್ಷದ ಬೆಂಗಳೂರು ಯುವತಿಯನ್ನು ರವಿವಾರ ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಯುವತಿಯನ್ನು ಬೆಂಗಳೂರಿನ ಪ್ರಸಿದ್ಧ ಮೌಂಟ್ ಕಾರ್ಮೆಲ್ ಮಹಿಳಾ ಕಾಲೇಜಿನ ವಿದ್ಯಾರ್ಥಿ ದಿಶಾ ರವಿ (21) ಎಂದು ಗುರುತಿಸಲಾಗಿದೆ.
ಗ್ರೆಟಾ ಥಂಬರ್ಗ್ ಪ್ರಾರಂಭಿಸಿದ್ದ ಭವಿಷ್ಯಕ್ಕಾಗಿ ಶುಕ್ರವಾರ ಎನ್ನುವ ಅಭಿಯಾನದಲ್ಲಿ ದಿಶಾ ಸಕ್ರಿಯವಾಗಿ ಪಾಲ್ಗೊಂಡಿದ್ದಳು.
ದಿಶಾ, ಗ್ರೆಟಾ ಥಂಬರ್ಗ್ ಹಂಚಿಕೊಂಡಿದ್ದ ಟೂಲ್ ಕಿಟ್ ಅನ್ನು ಎಡಿಟ್ ಮಾಡಿದ್ದಾರೆ ಎಂದು ಆಕೆಯ ಮೇಲೆ ಆರೋಪಿಸಲಾಗಿದ್ದು, ಆಕೆಯ ಮೇಲೆ ಮೊಕದ್ದಮೆ ದಾಖಲಾಗಿದೆ.
ಗ್ರೆಟಾ ಥಂಬರ್ಗ್ ಅಪ್ಲೋಡ್ ಮಾಡಿದ್ದ ಟೂಲ್ ಕಿಟ್ ಗೂಗಲ್ ಡಾಕ್ಯುಮೆಂಟ್ ಮಾದರಿಯಲ್ಲಿತ್ತು. ಗ್ರೆಟಾ ಅಪ್ಲೋಡ್ ಮಾಡಿದ ಕೆಲವೇ ನಿಮಿಷಗಳಲ್ಲಿ ಅದನ್ನು ಎಡಿಟ್ ಮಾಡಲಾಗಿತ್ತು. ಗ್ರೆಟಾ ಹಂಚಿಕೊಂಡಿದ್ದ ಆ ಟೂಲ್ ಕಿಟ್ ಭಾರೀ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ, ಈ ಬಗ್ಗೆ ದೆಹಲಿ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದರು.
ತನಿಖೆ ಪ್ರಾರಂಭಿಸಿದ್ದ ದೆಹಲಿ ಪೊಲೀಸರು, ಗ್ರೆಟಾ ಅಪ್ಲೋಡ್ ಮಾಡಿರುವ ಮೂಲದ ದಾಖಲೆಗಳ ಮಾಹಿತಿಯನ್ನು ಕೋರಿ ಗೂಗಲ್ಗೆ ಪತ್ರ ಬರೆದಿದ್ದು, ಅಪ್ಲೋಡ್ ಮಾಡಲು ಬಳಸಿದ ಸಾಮಾಜಿಕ ಜಾಲತಾಣಗಳ ಖಾತೆಗಳು ಹಾಗೂ ಯುಆರ್ಎಲ್ಗಳನ್ನು ನೀಡಲು ಹೇಳಲಾಗಿತ್ತು. ಗೂಗಲ್ ನೀಡಿದ ಮಾಹಿತಿಯನ್ನು ಆಧರಿಸಿ ದೆಹಲಿ ಪೊಲೀಸರು ದಿಶಾಳನ್ನು ಬಂಧಿಸಿದ್ದಾರೆ.
ಗ್ರೆಟಾ ಥಂಬರ್ಗ್, ರೈತರ ಹೋರಾಟವನ್ನು ಬೆಂಬಲಿಸಿ ಫೆ.3ರಂದು ಟ್ವೀಟ್ ಮಾಡಿದ್ದು, ಹೋರಾದ ರೂಪುರೇಶೆ ಇರುವ ಗೂಗಲ್ ಕಿಟ್ ಅನ್ನು ಅಪ್ಲೋಡ್ ಮಾಡಿದ್ದರು. ನಂತರ ಅದನ್ನು ಡಿಲೀಟ್ ಮಾಡಿ ಹೊಸ ದಾಖಲೆಯನ್ನು ಹಾಕಿದ್ದರು.
ಹೊಸ ಟೂಲ್ ಕಿಟ್ನಲ್ಲಿ ಫೆ.13 ಹಾಗೂ 14ರಂದು ಪ್ರತಿಭಟನೆ ನಡೆಸಬೇಕು ಎನ್ನುವ ಉಲ್ಲೇಖಗಳಿದ್ದವು. ಗ್ರೆಟಾ ಹಂಚಿಕೊಂಡಿದ್ದ ಟೂಲ್ಕಿಟ್ನಲ್ಲಿ ಗಣರಾಜ್ಯೋತ್ಸವ ದಿನದಂದು ನೆಸಬೇಕಾಗ ಹೋರಾಟಗಳ ವಿಚಾರದ ಬಗ್ಗೆಯೂ ತಿಳಿಸಲಾಗಿತ್ತು.