ಚೆನ್ನೈ, ಫೆ.14 (DaijiworldNews/MB) : ಚೆನ್ನೈ ಮೆಟ್ರೊ ರೈಲು ಹಂತ-1 ವಿಸ್ತರಣೆ, ಸಿಂಗಲ್ ಲೈನ್ ರೈಲ್ವೆ ವಿದ್ಯುದ್ದೀಕರಣ ಸೇರಿದಂತೆ ತಮಿಳುನಾಡಿನಲ್ಲಿ ಬಹುಕೋಟಿ ಮೌಲ್ಯದ ಹಲವಾರು ಯೋಜನೆಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಚಾಲನೆ ನೀಡಿದರು.
ವಾಶರ್ಮನ್ಪೇಟ್ನಿಂದ ಉತ್ತರ ಚೆನ್ನೈನ ವಿಮ್ಕೊ ನಗರಕ್ಕೆ ಸಂಪರ್ಕಿಸುವ 3,770 ಕೋಟಿ ಮೌಲ್ಯದ ಮೆಟ್ರೊ ರೈಲ್ವೆ ಯೋಜನೆ, ವಿಲ್ಲುಪುರಂ ಕಡಲೂರು-ಮೈಲಾದುರೈ ತಂಜಾವೂರು-ಮೈಲಾದುರೈ-ತಿರುವಾರೂರ್ ಸಿಂಗಲ್ ಲೈನ್ ರೈಲ್ವೆ ವಿದ್ಯುದ್ದೀಕರಣ ಯೋಜನೆ, ಚೆನ್ನೈ ಬೀಚ್ನಿಂದ ಅಟ್ಟಿಪಟ್ಟುವರೆಗೆ 293.40 ಮೌಲ್ಯದ ನಾಲ್ಕನೇ ರೈಲ್ವೆ ಹಳಿ ಯೋಜನೆ, ಐಐಟಿ ಮದ್ರಾಸ್ನ ಡಿಸ್ಕವರಿ ಕ್ಯಾಂಪಸ್ಗೆ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದರು. ಪ್ರಧಾನಿ ಮೋದಿ ಅವರು 2,640 ಕೋಟಿ ವೆಚ್ಚದ ಗ್ರ್ಯಾಂಡ್ ಅನಿಕಟ್ ಕಾಲುವೆ ವ್ಯವಸ್ಥೆಯ ವಿಸ್ತರಣೆ, ನವೀಕರಣ ಹಾಗೂ ಆಧುನೀಕರಣಕ್ಕೆ ಅಡಿಪಾಯ ಹಾಕಿದರು.
ಈ ಕಾರ್ಯಕ್ರಮವು ನೆಹರೂ ಸ್ಟೇಡಿಯನಲ್ಲಿ ನಡೆದಿದ್ದು, ಮುಖ್ಯಮಂತ್ರಿ ಕೆ. ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಓ. ಪನ್ನೀರ್ಸೆಲ್ವಂ, ಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್, ಸಚಿವರು, ಇತರೆ ನಾಯಕರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಪ್ರಧಾನಿ ಮೋದಿಯವರು, ಭೂ ಸೇನಾ ಮುಖ್ಯಸ್ಥ ಜನರಲ್ ಎಂ.ಎ. ನರವಾಣೆ ಅವರಿಗೆ ಅರ್ಜುನ್ ಯುದ್ದ ಟ್ಯಾಂಕ್ ಅನ್ನು ಹಸ್ತಾಂತರಿಸಿದರು.