ಮಂಡ್ಯ, ಫೆ.14 (DaijiworldNews/PY): "ಮಂಡ್ಯ ಜೆಡಿಎಸ್ನ ಕೋಟೆಯಾಗಿ ಉಳಿದಿಲ್ಲ" ಎಂದು ಸಚಿವ ನಾರಾಯಣ ಗೌಡ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, "ಮಂಡ್ಯದಲ್ಲಿ ಜೆಡಿಎಸ್ ಬೆರಳೆಣಿಕೆಯಷ್ಟು ಸ್ಥಾನಗಳನ್ನು ಮಾತ್ರವೇ ಗೆಲ್ಲುತ್ತಿದೆ. ಬಿಜೆಪಿ ಗ್ರಾ,.ಪಂ.ನಲ್ಲಿ 750-800 ಸ್ಥಾನವನ್ನು ಗೆದ್ದಿದೆ. ಇದನ್ನು ನೋಡಿದರೆ ಜಿಲ್ಲೆಯಲ್ಲಿ ಬಿಜೆಪಿಗೆ ಶಕ್ತಿ ಇದೆ ಎಂದು ತಿಳಿಯುತ್ತದೆ" ಎಂದಿದ್ದಾರೆ.
"ಕೆಳ ಹಂತದಿಂದ ಪಕ್ಷ ಸಂಘಟಿಸುವ ಕಾರ್ಯ ನಡೆಯುತ್ತಿದೆ. ಈ ವಿಚಾರದ ಬಗ್ಗೆ ನಾನು ಕಾಂಗ್ರೆಸ್ ಹಾಗ ಜೆಡಿಎಸ್ ನಾಯಕರನ್ನು ದೂರುವುದಿಲ್ಲ. ನಾವು ನಮ್ಮ ಪಕ್ಷದ ಬಲವರ್ಧನೆಗಾಗಿ ಕೆಲಸ ಮಾಡುತ್ತಿದ್ದೇವೆ" ಎಂದು ತಿಳಿಸಿದ್ದಾರೆ.
ಶಾಸಕ ಎಂ.ಶ್ರೀನಿವಾಸ್ ಅವರನ್ನು ಬಿಜೆಪಿಗೆ ಸೆಳೆಯುವ ಯತ್ನ ನಡೆಯುತ್ತಿದೆ ಎನ್ನುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಯಾರನ್ನೂ ಕೂಡಾ ನಾವು ಸೆಳೆಯುವ ಯತ್ನವನ್ನು ಮಾಡುತ್ತಿಲ್ಲ. ಒಂದಿಬ್ಬರು ಎಂಎಲ್ಎಗಳನ್ನು ಬಿಟ್ಟರೆ ಉಳಿದವರು ನಮ್ಮೊಂದಿಗಿದ್ದಾರೆ. ಕೆಲವು ವಿಚಾರಗಳನ್ನು ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಪಕ್ಷವನ್ನು ಮುನ್ನಡೆಸಲು ಜೊತೆಯಾಗಿ ಬಂದವರನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ" ಎಂದಿದ್ದಾರೆ.
"ಪ್ರಸ್ತುತ ಜಿಲ್ಲೆಯಲ್ಲಿ ಸಾಕಷ್ಟು ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ನಾನು ಆ ವಿಚಾರವನ್ನು ಬಹಿರಂಗಪಡಿಸುವುದಿಲ್ಲ. ಈಗ ಆ ವಿಚಾರದ ಬಗ್ಗೆ ಹೇಳಿದರೆ ನೀವು ಅದರ ದಾರಿ ತಪ್ಪಿಸುತ್ತೀರಿ. ಆ ಕಾರಣದಿಂದ ಎಲ್ಲಾ ಒಳ್ಳೆಯದಾದ ಬಳಿಕ ನಿಮ್ಮೊಂದಿಗೆ ಹೇಳುತ್ತೇನೆ" ಎಂದು ಹೇಳಿದ್ದಾರೆ.