ಶ್ರೀನಗರ, ಫೆ.14 (DaijiworldNews/MB) : ''ನನ್ನನ್ನು, ಸಂಸದ ಫಾರೂಕ್ ಅಬ್ದುಲ್ಲಾ ಸೇರಿದಂತೆ ನಮ್ಮ ಕುಟುಂಬ ಸದಸ್ಯರನ್ನು ಅಧಿಕಾರಿಗಳು ಗೃಹಬಂಧನದಲ್ಲಿರಿಸಿದ್ದಾರೆ'' ಎಂದು ಜಮ್ಮು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಭಾನುವಾರ ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಇದು ಆಗಸ್ಟ್ 2019 ರ ನಂತರದ ಹೊಸ ಜಮ್ಮುಕಾಶ್ಮೀರ. ಯಾವುದೇ ವಿವರಣೆಯಿಲ್ಲದೆ ನಾವು ನಮ್ಮ ಮನೆಗಳಲ್ಲಿ ಬಂಧಿಸಲಾಗಿದೆ. ನನ್ನ ತಂದೆಯನ್ನು, ನನ್ನನ್ನು ನಮ್ಮ ಮನೆಯಲ್ಲಿ ಬಂಧಿಸಿದ್ದಾರೆ. ಹಾಗೆಯೇ ಅವರು ನನ್ನ ಸಹೋದರಿ ಮತ್ತು ಅವಳ ಮಕ್ಕಳನ್ನು ಕೂಡಾ ಬಂಧನದಲ್ಲಿರಿಸಿದ್ದಾರೆ'' ಎಂದು ದೂರಿದ್ದಾರೆ.
ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿಗಳು, ''ಪುಲ್ವಾಮಾ ದಾಳಿಯ ಎರಡನೇ ವರ್ಷದ ಕಾರಣ ಮುನ್ನಚ್ಚೆರಿಕಾ ಕ್ರಮವಾಗಿ ಸಂರಕ್ಷಿತ ವ್ಯಕ್ತಿಗಳು ಹಾಗೂ ವಿಐಪಿಗಳ ಚಲನೆಯನ್ನು ತಡೆಯಲಾಗಿದೆ'' ಎಂದು ಹೇಳಿದ್ದಾರೆ.
ಇನ್ನು ಇದಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ನಿವಾಸದ ಹೊರಗಡೆ ಪೊಲೀಸ್ ವಾಹನಗಳು ನಿಂತಿರುವ ಚಿತ್ರಗಳನ್ನು ಹಂಚಿದ್ದಾರೆ.
ಶ್ರೀನಗರ ಪೊಲೀಸರು ಟ್ವಿಟರ್ನಲ್ಲಿ, ''ಇಂದು ಪುಲ್ವಾಮಾ ದಾಳಿಯ ಎರಡನೇ ವರ್ಷವಾಗಿದೆ. ಈ ಹಿನ್ನೆಲೆ ವಿಐಪಿಗಳು / ಸಂರಕ್ಷಿತ ವ್ಯಕ್ತಿಗಳ ಚಲನೆಯನ್ನು ನಿಯಂತ್ರಿಸಲಾಗಿದೆ. ಎಲ್ಲರಿಗೂ ಯಾವುದೇ ಪ್ರವಾಸದ ಯೋಜನೆ ಕೈಗೊಳ್ಳದಂತೆ ಮುಂಚಿತವಾಗಿ ತಿಳಿಸಲಾಗಿದೆ'' ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಒಮರ್, ''ಇದು ನಿಜವಾಗಿ ಪೋಲಿಸರ ನಿಯಂತ್ರಣದಲ್ಲಿರುವ ಟ್ವಿಟರ್ ಖಾತೆಯೇ ಎಂದು ತಿಳಿದಿಲ್ಲ. ದಯವಿಟ್ಟು ನೀವು ನನ್ನನ್ನು ಯಾವ ಕಾನೂನಿನಡಿಯಲ್ಲಿ ಇಂದು ನನ್ನ ಮನೆಯಲ್ಲಿ ಬಂಧಿಸಿದ್ದೀರಿ ಎಂದು ಹೇಳಿ? ನನ್ನ ಮನೆಯಿಂದ ಹೊರಹೋಗದಂತೆ ನೀವು ನನಗೆ ಸಲಹೆ ನೀಡಬಹುದು ಆದರೆ ಒತ್ತಾಯಪೂರ್ವಕವಾಗಿ ಭದ್ರತೆ ಒದಗಿಸಲು ಸಾಧ್ಯವಿಲ್ಲ'' ಎಂದಿದ್ದಾರೆ.