ಬೆಂಗಳೂರು, ಫೆ.14 (DaijiworldNews/PY): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಹಾಗೂ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಮೊಮ್ಮಗ, ಉದ್ಯಮಿ ದಿ.ಸಿದ್ದಾರ್ಥ್ ಅವರ ಪುತ್ರ ಅಮರ್ಥ್ಯ ಅವರ ವಿವಾಹ ರವಿವಾರ ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ನಡೆಯಿತು.
ಧಾರ್ಮಿಕ ಸಂಪ್ರದಾಯದ ಪ್ರಕಾರ ವಿವಾಹ ನೆರವೇರಿತು. ವಿವಾಹ ಸಮಾರಂಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಭಾಗವಹಿಸುವ ನಿರೀಕ್ಷೆಯಿದ್ದು, ಸುಮಾರು 800 ಮಂದಿ ಮುಖ್ಯ ಅಥಿತಿಗಳನ್ನು ವಿವಾಹಕ್ಕೆ ಆಹ್ವಾನಿಸಲಾಗಿದೆ.
ತಮ್ಮ ಪುತ್ರಿಗೆ ಅಮರ್ಥ್ಯ ತಾಳಿ ಕಟ್ಟುತ್ತಿದ್ದಂತೆ ಡಿ.ಕೆ. ಶಿವಕುಮಾರ್ ಅವರು ಭಾವುಕರಾಗಿ ಕಣ್ಣೀರು ಹಾಕಿದರು. ವಿವಾಹದ ಹಿನ್ನೆಲೆ ನಡೆದ ಸಂಗೀತ ರಸ ಸಂಜೆ ಕಾರ್ಯಕ್ರಮದಲ್ಲಿ ಐಶ್ವರ್ಯ ಐ ಲವ್ ಯೂ ಅಪ್ಪ ಹಾಡಿಗೆ ಹೆಜ್ಜೆ ಹಾಕಿದ್ದು, ಈ ವೇಳೆ ಡಿ.ಕೆ.ಶಿವಕುಮಾರ್ ಅವರು ಭಾವುಕರಾಗಿದ್ದರು.
ಡಿ.ಕೆ.ಶಿವಕುಮಾರ್ ದಂಪತಿ ವಧು-ವರರಿಗೆ ಅಕ್ಷತೆ ಹಾಕಿ, ಹಾರೈಸಿದ್ದಾರೆ. ಈ ಸಂದರ್ಭ ಐಶ್ವರ್ಯ ಅವರು ಕೂಡಾ ಭಾವುಕರಾದರು. ಐಶ್ವರ್ಯ ಕೆಂಪು ಬಣ್ಣದ ರೇಷ್ಮೆ ಸೀರೆಯುಟ್ಟು, ವಜ್ರಾಭರಣ ತೊಟ್ಟಿದ್ದರು.
ಕಳೆದ ಒಂದು ವಾರದಿಂದ ಡಿ.ಕೆ.ಶಿವಕುಮಾರ್ ಅವರ ಮನೆಯಲ್ಲಿ ಐಶ್ವರ್ಯಳ ವಿವಾಹ ಸಂಭ್ರಮ ನಡೆಯುತ್ತಿದ್ದು, ಮೆಹೆಂದಿ, ಅರಶಿಣ ಶಾಸ್ತ್ರ, ಸಂಗೀತ ಕಾರ್ಯಕ್ರಮಗಳು ನಡೆದಿವೆ. ನಗರದ ವೈಟ್ಫೀಲ್ಡ್ನಲ್ಲಿನ ಖಾಸಗಿ ಹೋಟೆಲ್ನಲ್ಲಿ ರವಿವಾರ ಬೆಳಗ್ಗೆ ವಿವಾಹ ನಡೆಯಿತು. ವಿವಾಹ ಸಮಾರಂಭದಲ್ಲಿ ಎಸ್.ಎಂ.ಕೃಷ್ಣ ಹಾಗೂ ಡಿ.ಕೆ.ಶಿವಕುಮಾರ್ ಅವರ ಕುಟುಂಬಸ್ಥರು ಮಾತ್ರವೇ ಭಾಗವಹಿಸಿದ್ದು, ಆಪ್ತ ಸಂಬಂಧಿಕರಿಗೆ ಮಾತ್ರವೇ ಆಮಂತ್ರಣ ನೀಡಲಾಗಿತ್ತು.
ಫೆ.17ರಂದು ಪ್ರೆಸ್ಟೀಜ್ ಗಾಲ್ಫ್ಶೈರ್ ರೆಸಾರ್ಟ್ನಲ್ಲಿ ರಿಸೆಪ್ಷನ್ ನಡೆಯಲಿದ್ದು, ಪ್ರಭಾವಿ ರಾಜಕೀಯ ನಾಯಕರು, ಉದ್ಯಮಿಗಳು ಕೂಡ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.
ಫೆ.28ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೀಗರ ಊಟ ನಡೆಯಲಿದ್ದು, ಡಿಕೆ ಶಿವಕುಮಾರ್ ಕಾಂಗ್ರೆಸ್ನ ಕಾರ್ಯಕರ್ತರು, ತಮ್ಮ ಬೆಂಬಲಿಗರಿಗೂ ಊಟ ಹಾಕಿಸಲಿದ್ದಾರೆ ಎನ್ನಲಾಗಿದೆ.
ಸಿದ್ದಾರ್ಥ್ ಹೆಗ್ಡೆ ಅವರ ಆತ್ಮಹತ್ಯೆಯ ನಂತರ ಅಮರ್ಥ್ಯ ಹಾಗೂ ಐಶ್ವರ್ಯ ವಿವಾಹದ ಪ್ರಸ್ತಾಪ ಮುನ್ನೆಲೆಗೆ ಬಂದಿತ್ತು. 2020ರ ಜೂನ್ನಲ್ಲಿ ಡಿಕೆ ಶಿವಕುಮಾರ್ ಕುಟುಂಬಸ್ಥರು ಎಸ್.ಎಂ ಕೃಷ್ಣ ಅವರ ಮನೆಗೆ ಭೇಟಿ ನೀಡಿ ವಿವಾಹ ಮಾತುಕತೆ ನಡೆಸಿದ್ದರು. ನಂತರ ಲಾಕ್ಡೌನ್ ಸಮಯದಲ್ಲಿ ಇಬ್ಬರ ನಿಶ್ಚಿತಾರ್ಥವೂ ನೆರವೇರಿತ್ತು.