ಚಮೋಲಿ, ಫೆ.14 (DaijiworldNews/PY): "ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಕುಸಿತದಿಂದಾದ ಪ್ರವಾಹ ದುರಂತದಲ್ಲಿ ಈವರೆಗೆ 40 ಮೃತದೇಹಗಳನ್ನು ಹೊರತೆಗೆಯಲಾಗಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಬಗ್ಗೆ ರವಿವಾರ ಮಾಹಿತಿ ನೀಡಿದ ಉತ್ತರಾಖಂಡದ ಡಿಜಿಪಿ ಅಶೋಕ್ ಕುಮಾರ್ ಅವರು, "ತಪೋವನ ಸುರಂಗದ ಅವಶೇಷಗಳ ಅಡಿಯಿಂದ ಪುನಃ 2 ಮೃತದೇಹಗಳನ್ನು ಹೊರತೆಗೆಯಲಾಗಿದೆ" ಎಂದಿದ್ದಾರೆ.
ಉತ್ತರಾಖಂಡದ ಚಮೋಲಿ ಜಿಲ್ಲೆಯ ತಪೋವನ-ರೈನಿ ಪ್ರದೇಶದಲ್ಲಿ ಫೆ.7ರ ರವಿವಾರದಂದು ನೀರ್ಗಲ್ಲು ಕುಸಿದು ಧೌಲಿಗಂಗಾ ಹಾಗೂ ಅಲಂಕಾನಂದ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿದ್ದು, ರಿಷಿಗಂಗಾ ವಿದ್ಯುತ್ ಯೋಜನೆ ಹಾನಿಗೊಳಗಾಗಿತ್ತು.
ದುರಂತ ಸಂಭವಿಸಿದ ಬೆನ್ನಲ್ಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರೂ ಈಗಲೂ ಸುಮಾರು 164 ಜನ ಕಾಣೆಯಾಗಿದ್ದಾರೆ.
ಬಹುತೇಕ ಮೃತದೇಹಗಳ ಗುರುತು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಉತ್ತರಾಖಂಡದ ರಾಜ್ಯ ವಿಪತ್ತು ನಿರ್ವಹಣಾ ಪಡೆ ಸೇರಿದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ.
"ರಕ್ಷಣಾ ಕಾರ್ಯಾಚರಣೆಯ ಸಂದರ್ಭ ಮತ್ತೆರಡು ಮೃತದೇಹಗಳು ಪತ್ತೆಯಾದ ಕಾರಣ ರಕ್ಷಣಾ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಲಾಗಿದೆ" ಎಂದು ಚಮೋಲಿ ಜಿಲ್ಲಾಧಿಕಾರಿ ಸ್ವಾತಿ ಭದೋರಿಯಾ ಹೇಳಿದ್ದಾರೆ.