ಚಿಕ್ಕಬಳ್ಳಾಪುರ, ಫೆ.14 (DaijiworldNews/PY): "ಕೃಷಿಯಲ್ಲಿ ಸುಧಾರಣೆ ತರಲು ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಕಾಯ್ದೆ ಜಾರಿಗೆ ತಂದಿದ್ದಾರೆ. ಈ ಕಾಯ್ದೆಗಳ ಬಗ್ಗೆ ರೈತರ ದಾರಿ ತಪ್ಪಿಸುವ ಕಾರ್ಯ ನಡೆಯುತ್ತಿದ್ದು, ಯಾವುದೇ ರೈತರು ವದಂತಿಗಳಿಗೆ ಕಿವಿಕೊಡಬಾರದು" ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಪ್ರಧಾನಿ ಮೋದಿ ಅವರು ಹೇಳಿದಂತೆ ನಾವು ಬುದ್ದಿಜೀವಿಗಳನ್ನು ನೋಡಿದಂತೆ ಇದೀಗ ಆಂದೋಲನ ಜೀವಿಗಳನ್ನು ನೋಡುತ್ತಿದ್ದೇವೆ. ಈ ರೀತಿಯ ಮಂದಿ ನಿತ್ಯ ಆಂದೋಲನ ನಡೆಸಲು ಕಾಯುತ್ತಿರುತ್ತಾರೆ" ಎಂದಿದ್ದಾರೆ.
"ಕೇಂದ್ರ ಸರ್ಕಾರ ಸ್ವಸ್ಥ ಭಾರತಕ್ಕೆ ಮುನ್ನುಡಿ ಬರೆಯುವ ನಿಟ್ಟಿನಲ್ಲಿ ಆತ್ಮನಿರ್ಭರ ಭಾರತ ಬಜೆಟ್ ಮಂಡನೆ ಮಾಡಿದೆ. ಈ ಬಜೆಟ್ ರೈತರ ಆದಾಯ ದುಪ್ಪಟ್ಟು ಮಾಡುವ ಬಜೆಟ್ ಆಗಿದೆ. ಆದರೆ, ಆತ್ಮನಿರ್ಭರ ಭಾರತದ ಪರಿಕಲ್ಪನೆಯು ಆಮದು ನಾಯಕರಿರುವ ಕಾಂಗ್ರೆಸ್ ಪಕ್ಷಕ್ಕೆ ಅರ್ಥವಾಗುತ್ತಿಲ್ಲ" ಎಂದು ಟೀಕೆ ಮಾಡಿದ್ದಾರೆ.
"ದೇಶದ ಸರ್ವಾಂಗೀಣ ಅಭಿವೃದ್ದಿಯೇ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಬಜೆಟ್ನ ಮಂತ್ರ. ಕೊರೊನಾ ಕಾರಣದಿಂದ ಆರ್ಥಿಕ ವ್ಯವಸ್ಥೆಯಲ್ಲಾದ ಸಮಸ್ಯೆಯನ್ನು ಮುಂಬರುವ ಕೆಲವೇ ತಿಂಗಳಿನಲ್ಲಿ ಸರಿಪಡಿಸುವಂತೆ ಮಾಡುವ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ" ಎಂದಿದ್ದಾರೆ.
"ಮಾನವ ಸಂಪನ್ಮೂಲ ಅಭಿವೃದ್ದಿ ಸೇರಿದಂತೆ ಆರೋಗ್ಯ ಹಾಗೂ ಯೋಗಕ್ಷೇಮ, ಅಂತರ್ಗತ ಅಭಿವೃದ್ದಿ, ಸಂಶೋಧನೆ ಮತ್ತು ಅಭಿವೃದ್ದಿ, ಗರಿಷ್ಠ ಆಡಳಿತ ಹಾಗೂ ಕನಿಷ್ಠ ಸರ್ಕಾರ ಎನ್ನುವ ಆರು ಅಂಶಗಳಲ್ಲಿ ಬಜೆಟ್ ರೂಪಿಸಲಾಗಿದೆ. ಆರ್ಥಿಕತೆಗೆ ಸುಮಾರು 34,83,236 ಕೋಟಿ. ರೂ.ಗಾತ್ರದ ಬಜೆಟ್ ಚಿಕಿತ್ಸೆ ನೀಡುವಂತಿದೆ" ಎಂದು ಹೇಳಿದ್ದಾರೆ.