ನವದೆಹಲಿ, ಫೆ.14 (DaijiworldNews/PY): ಸಾರ್ವಜನಿಕ ಆಸ್ತಿಗಳಿಗೆ ಪ್ರತಿಭಟನೆಯ ಸಂದರ್ಭ ಉಂಟಾಗುವ ಹಾನಿಯನ್ನು ಪ್ರತಿಭಟನಾಕಾರರಿಂದಲೇ ಭರಿಸುವ ಕಾನೂನು ಜಾರಿಗೆ ಹರಿಯಾಣ ಸರ್ಕಾರ ಚಿಂತನೆ ನಡೆಸಿದೆ.
ಈ ಹಿಂದೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗ ಆದಿತ್ಯನಾಥ್ ಅವರು ಈ ರೀತಿಯಾದ ಕ್ರಮವನ್ನು ತೆಗೆದುಕೊಂಡಿದ್ದರು. ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ನಂತರ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಈ ಕಾನೂನು ಜಾರಿಯ ವಿಚಾರವಾಗಿ ಬಹಿರಂಗವಾದ ಹೇಳಿಕೆ ನೀಡಿದ್ದಾರೆ.
ಮನೋಹರ್ ಲಾಲ್ ಖಟ್ಟರ್ ಅವರು ಅಮಿತ್ ಶಾರೊಂದಿಗಿನ ಸಭೆಯಲ್ಲಿ ರೈತರ ಪ್ರತಿಭಟನೆಯ ವಿಚಾರದ ಬಗ್ಗೆಯೂ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಗಲಭೆಯ ಸಂದರ್ಭ ಸಾರ್ವಜನಿಕ ಆಸ್ತಿಗಳಿಗೆ ಉಂಟಾಗುವ ಹಾನಿಯ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಸಾರ್ವಜನಿಕ ಆಸ್ತಿಗಳಿಗೆ ಪ್ರತಿಭಟನೆಯ ಸಂದರ್ಭ ಉಂಟಾಗುವ ಹಾನಿಯನ್ನು ಪ್ರತಿಭಟನಾಕಾರರಿಂದಲೇ ಭರಿಸುವ ಕಾನೂನು ಜಾರಿಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ" ಎಂದು ಹೇಳಿದ್ದಾರೆ.
ಹರಿಯಾಣದ ಪ್ರಮುಖ ಸಚಿವರು ಕೂಡಾ ಈ ಕಾನೂನಿನ ಜಾರಿಗೆ ಒಪ್ಪಿಗೆ ಸೂಚಿಸಿದ್ದಾರೆ.