ನವದೆಹಲಿ, ಫೆ.13 (DaijiworldNews/MB) : ದೆಹಲಿಯಲ್ಲಿ ಗಣರಾಜ್ಯೋತ್ಸವದ ದಿನ ರೈತರು ನಡೆಸಿದ ಟ್ರ್ಯಾಕ್ಟರ್ ಪರೇಡ್ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ರೈತರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಈ ಬಗ್ಗೆ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ರೈತ ಸಂಘಟನೆಗಳು ಒತ್ತಾಯಿಸಿದೆ.
ಸಿಂಘು ಗಡಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಯುಕ್ತ ಕಿಸಾನ್ ಮೋರ್ಚಾ ಕಾನೂನು ಘಟಕದ ಸದಸ್ಯ ಕುಲದೀಪ್ ಸಿಂಗ್, ''ರೈತರ ವಿರುದ್ಧದ ಸುಳ್ಳು ಪ್ರಕರಣಗಳ ಹಿಂದೆ ಪಿತೂರಿ ಇದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು'' ಎಂದು ಆಗ್ರಹಿಸಿದರು.
ಹಾಗೆಯೇ ಪೊಲೀಸ್ ನೋಟಿಸ್ ಪಡೆಯುತ್ತಿರುವ ರೈತರು ನೇರವಾಗಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗದಂತೆ ಮನವಿ ಮಾಡಿದರು. ವಿಚಾರಣೆಗೆ ಹಾಜರಾಗುವ ಮುನ್ನ ಯಾವುದೇ ಸಹಾಯಕ್ಕಾಗಿ ರೈತ ಸಂಘಗಳು ರಚಿಸಿದ ಕಾನೂನು ಘಟಕವನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.