ಚಿತ್ರದುರ್ಗ, ಫೆ.13 (DaijiworldNews/MB) : ಯೋಗವನ ಬೆಟ್ಟದ ಪೀಠಾಧ್ಯಕ್ಷ ಸ್ಥಾನ ಕೈತಪ್ಪಿದ್ದ ಹಿನ್ನೆಲೆ ಮನನೊಂದ ಶರಣರ ಸುಜ್ಞಾನ ಮಂಟಪದ ತಿಪ್ಪೇರುದ್ರ ಸ್ವಾಮೀಜಿ ಅವರು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರ ಎದುರಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿದ ಘಟನೆ ಶನಿವಾರ ನಡೆದಿದೆ.
ಜಿಲ್ಲೆಯ ಬಿಜೆಪಿ ಕಾರ್ಯಾಲಯದಲ್ಲಿದ್ದ ಸಚಿವ ಶ್ರೀರಾಮುಲು ಅವರನ್ನು ಭೇಟಿಯಾಗಲೆಂದು ಆಗಮಿಸಿದ್ದ ಸ್ವಾಮೀಜಿ ವಿಷ ಸೇವಿಸಲು ಯತ್ನಿಸಿದ್ದು, ಕೂಡಲೇ ಸಚಿವರು ಹಾಗೂ ಪೊಲೀಸರು ತಡೆದು ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಸದ್ಯ ಸ್ವಾಮೀಜಿಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ವಾಮೀಜಿಯವರು ಸಚಿವ ರಾಮುಲು ಅವರಿಗೆ ಬರೆದಿರುವ ಪತ್ರ ಸ್ವಾಮೀಜಿ ಬಳಿ ಪತ್ತೆಯಾಗಿದೆ.
ಯೋಗವನ ಬೆಟ್ಟದ ಪೀಠಾಧ್ಯಕ್ಷರಾಗಿದ್ದ ಕಪರ್ದಿ ಸಿದ್ದಲಿಂಗ ಸ್ವಾಮೀಜಿ ಅವರು ನಿಧನರಾದ ಬಳಿಕ ಈ ಪೀಠಾಧ್ಯಕ್ಷ ಸ್ಥಾನಕ್ಕೆ ಬಸವಕುಮಾರ ಸ್ವಾಮೀಜಿ ಅವರನ್ನು ನೇಮಿಸಲಾಗಿತ್ತು. ಆದರೆ ಈ ನೇಮಕಕ್ಕೆ ಸ್ವಾಮೀಜಿ ವಿರೋಧ ವ್ಯಕ್ತಪಡಿಸಿದ್ದರು.
''ನನಗೆ ಮಾಜಿ ಶಾಸಕ ಎಸ್.ಕೆ. ಬಸವರಾಜನ್, ಯೋಗವನ ಬೆಟ್ಟ ಮತ್ತು ಗಾಣಿಗ ಗುರುಪೀಠದ ಪೀಠಾಧ್ಯಕ್ಷ ಬಸವಕುಮಾರ ಸ್ವಾಮೀಜಿ ಹಾಗೂ ಪವಿತ್ರಾ ಎಂಬ ಮಹಿಳೆಯಿಂದ ಅನ್ಯಾಯವಾಗಿದ್ದು, ನನ್ನ ಸಾವಿಗೆ ಇವರೇ ಕಾರಣ. ಶಾಸಕರು ವಿಶ್ವಾಸ ದ್ರೋಹ ಬಗೆದಿದ್ದಾರೆ. ನಾನು ಯೋಗವನ ಬೆಟ್ಟದಲ್ಲಿ ಧರ್ಮ ಪ್ರಚಾರ, ಸಮಾಜ ಸೇವೆ ಮಾಡಿಕೊಂಡಿದ್ದೆ ಆದರೆ ಸಂಚಿನಿಂದ ನನ್ನನ್ನು ಅಲ್ಲಿಂದ ಹೊರಹಾಕಲಾಗಿದೆ. ಇವರೆಲ್ಲರೂ ನನಗೆ ಸರಿಯಾದ ಪರಿಹಾರ ನೀಡದೆ ವಂಚನೆ ಮಾಡಿದ್ದು ನನ್ನ ಬದುಕನ್ನು ಬೀದಿಗೆ ತಳ್ಳಿದ್ದಾರೆ. ಇವರೆಲ್ಲರೂ ಸರ್ಕಾರದ ಆಸ್ತಿ ಕಬಳಿಸಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಇವರ ಈ ಹಣ, ಅಧಿಕಾರ ಬಲದ ಮುಂದೆ ನನ್ನ ಹೋರಾಟಕ್ಕೆ ಫಲ ದೊರೆಯದ ಹಿನನೆಲೆ ನಾನು ಆತ್ಮಹತ್ಯೆಯ ನಿರ್ಧಾರ ಮಾಡಿದೆ'' ಎಂದು ಉಲ್ಲೇಖಿಸಲಾಗಿದೆ.
''ತಪ್ಪಿತಸ್ಥರಿಗೆ ಸರ್ಕಾರ ಶಿಕ್ಷೆ ಕೊಡಿಸಿ, ಬೆಟ್ಟಕ್ಕಾಗಿ ದುಡಿದ ಪೂರ್ಣಾನಂದ ಸ್ವಾಮೀಜಿ, ರುದ್ರಪ್ಪ, ಕಮಲಮ್ಮ ಅವರಿಗೆ ನ್ಯಾಯ ದೊರಕಿಸಿಕೊಡಬೇಕು'' ಎಂದು ಕೂಡಾ ಈ ಡೆತ್ನೋಟ್ ಮೂಲಕ ಮನವಿ ಮಾಡಿದ್ದಾರೆ.