ಜೈಪುರ, ಫೆ.13 (DaijiworldNews/MB) : ''ದೇಶದ ಇಡೀ ಕೃಷಿ ವ್ಯವಹಾರವನ್ನು ತನ್ನ ಇಬ್ಬರು ಬಂಡವಾಳಶಾಹಿ ಉದ್ಯಮ ಮಿತ್ರರಿಗೆ ಹಸ್ತಾಂತರಿಸಲು ಪ್ರಧಾನಿ ನರೇಂದ್ರ ಮೋದಿ ಬಯಸುತ್ತಾರೆ'' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಆರೋಪಿಸಿದ್ದಾರೆ.
ರಾಜಸ್ಥಾನದ ರೂಪನ್ಗಢದಲ್ಲಿ ರೈತರನ್ನು ಉದ್ದೇಶಿಸಿ ಅವರು ಮಾತನಾಡಿದರು. ರಾಜಸ್ಥಾನದ ಸಾಂಪ್ರಾದಾಯಿಕ ಪೇಟಾ ಧರಿಸಿ ಟ್ರ್ಯಾಕ್ಟರ್ ಚಾಲನೆ ಮಾಡುತ್ತಾ ರಾಹುಲ್ ಗಾಂಧಿಯವರು ರ್ಯಾಲಿ ಸ್ಥಳವನ್ನು ತಲುಪಿದರು.
''ದೇಶದ 40 ಪ್ರತಿಶತ ಜನರ ವ್ಯವಹಾರ ಕೃಷಿಯಾಗಿದ್ದು, ರೈತರು, ಸಣ್ಣ ಹಾಗೂ ಮಧ್ಯಮ ಉದ್ಯಮಿಗಳು, ವ್ಯಾಪಾರಿಗಳು ಮತ್ತು ಕಾರ್ಮಿಕರು ಇದರಲ್ಲಿ ಒಳಗೊಂಡಿದ್ದಾರೆ. ಆದರೆ ಈ ಕೃಷಿ ವ್ಯವಹಾರವನ್ನೇ ಪ್ರಧಾನಿ ಮೋದಿಯವರು, ತನ್ನಿಬ್ಬರು ಮಿತ್ರರಿಗೆ ನೀಡಲು ಬಯಸುತ್ತಿದ್ದಾರೆ. ಅದಕ್ಕಾಗಿ ಅವರು ಕೃಷಿ ಕಾಯ್ದೆಯನ್ನು ತಂದಿದ್ದಾರೆ'' ಎಂದು ದೂರಿದರು.
''ಪ್ರಧಾನಿ ಮೋದಿ ಆಯ್ಕೆ ನೀಡುವುದಾಗಿ ಹೇಳಿದ್ದು, ಅದು ಹಸಿವು, ನಿರುದ್ಯೋಗ ಮತ್ತು ಆತ್ಮಹತ್ಯೆ. ಈ ಕೃಷಿ ಕಾಯ್ದೆಗಳು ಮೊದಲು ಮಂಡಿ ವ್ಯವಸ್ಥೆಯನ್ನು ನಿರ್ನಾಮ ಮಾಡಲಿದ್ದು ಬಳಿಕ ಉದ್ಯಮಿಗಳಿಗೆ ಬೆಳೆಯನ್ನು ಅನಿಯಂತ್ರಿತ ದಾಸ್ತಾನು ಮಾಡಲು ಅವಕಾಶ ನೀಡಲಿದೆ. ಬಳಿಕ ಮೂರನೇಯದಾಗಿ ನ್ಯಾಯಾಲಯಗಳಿಗೆ ರೈತರು ಹೋಗುವ ಹಕ್ಕನ್ನೇ ಕಸಿದುಕೊಳ್ಳುತ್ತದೆ'' ಎಂದು ಹೇಳಿದರು.