ನವದೆಹಲಿ, ಫೆ.13 (DaijiworldNews/MB) : ''ಸೂಕ್ತ ವೇಳೆ ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡಲಾಗುವುದು'' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಶನಿವಾರ ಹೇಳಿದ್ದಾರೆ.
ಪ್ರತಿಪಕ್ಷಗಳು ಸಂವಿಧಾನದ 370ನೇ ವಿಧಿ ರದ್ಧತಿ ವೇಳೆ ನೀಡಲಾಗಿದ್ದ ಭರವಸೆಗಳ ಬಗ್ಗೆ ಪ್ರಶ್ನಿಸಿದ ವೇಳೆ ಅದಕ್ಕೆ ಪ್ರತಿಕ್ರಿಯಿಸಿದ ಅಮಿತ್ ಶಾ ಅವರು, ''370ನೇ ವಿಧಿ ರದ್ದುಪಡಿಸಿ 17 ತಿಂಗಳಾಗಿದ್ದು ನೀವು ಈಗಲೇ ಎಲ್ಲಾ ಹೊಣೆ ನಾವು ಹೊರುವಂತೆ ಮಾತನಾಡುತ್ತಿದ್ದೀರಿ. ಆದರೆ ನೀವು 70 ವರ್ಷ ಮಾಡಿದ್ದು ಏನು? ಅದರ ಹೊಣೆ ನೀವು ಹೊರುತ್ತೀರಾ?'' ಎಂದು ಪ್ರಶ್ನಿಸಿದ್ದು, ''ನೀವು ಸರಿಯಾಗಿ ಕೆಲಸ ಮಾಡಿದ್ದರೆ, ನೀವು ನಮ್ಮನ್ನು ಪ್ರಶ್ನಿಸುವುದರಲ್ಲಿ ಯಾವುದೇ ತೊಂದರೆಯಿಲ್ಲ. ಆದರೆ ನೀವೇ ಸರಿಯಾಗಿ ಕೆಲಸ ಮಾಡಿಲ್ಲ'' ಎಂದು ದೂರಿದರು.
''ತಲೆಮಾರುಗಳವರೆಗೆ ಆಡಳಿತ ನಡೆಸುತ್ತಾ ಬಂದವರೂ ಏನು ಆಡಳಿತ ಮಾಡಿದ್ದಾರೆ ಎಂದು ಈಗ ನೆನಪಿಸಿಕೊಳ್ಳಿ'' ಎಂದು ಕೂಡಾ ಇದೇ ವೇಳೆ ಹೇಳಿದರು.
2019, ಆಗಸ್ಟ್ 5 ರಂದು ಕೇಂದ್ರ ಸರ್ಕಾರ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿ, ಜಮ್ಮು- ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿತ್ತು.