ಬೆಳಗಾವಿ, ಫೆ.13 (DaijiworldNews/PY): "ಪಡಿತರದಲ್ಲಿ ಅಕ್ಕಿಯ ಜೊತೆ ರಾಗಿ ಹಾಗೂ ಜೋಳ ವಿತರಣೆಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರೆತಿದೆ" ಎಂದು ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಪಡಿತರದಲ್ಲಿ ಅಕ್ಕಿ ಹಾಗೂ ಗೋಧಿಯ ವಿತರಣೆಯನ್ನು ಕಡಿತಗೊಳಿಸಲಾಗುವುದು. ಅದೇ ಪ್ರಮಾಣದಲ್ಲಿ ರಾಗಿ, ಜೋಳ ಅಥವಾ ಸ್ಥಳೀಯವಾಗಿ ಬಳಕೆಯಲ್ಲಿರುವ ಧಾನ್ಯಗಳ ವಿತರಣೆಗೆ ಅವಕಾಶ ಕಲ್ಪಿಸುವಂತೆ ಇತ್ತೀಚೆಗೆ ಕೇಂದ್ರ ಆಹಾರ ಹಾಗೂ ನಾಗರಿಕ ಪೂರೈಕೆ ರಾಜ್ಯ ಸಚಿವ ರಾವ್ಸಾಹೇಬ್ ದಾನ್ವೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೆ" ಎಂದರು.
"ದ.ಕ ಜಿಲ್ಲೆಗಳಲ್ಲಿ 3 ಕೆ.ಜಿ. ರಾಗಿ ಹಾಗೂ 2 ಕೆ.ಜಿ. ಅಕ್ಕಿ ಹಾಗೂ ಉತ್ತರದ ಜಿಲ್ಲೆಗಳಲ್ಲಿ 3 ಕೆ.ಜಿ. ಜೋಳ ಮತ್ತು 2 ಕೆ.ಜಿ. ಅಕ್ಕಿ ನೀಡಲಾಗುವುದು. ಸದ್ಯ ರಾಜ್ಯದಲ್ಲಿ ಅಕ್ಕಿ ಹಾಗೂ ಗೋಧಿ ಮಾತ್ರವೇ ನೀಡಲಾಗುತ್ತಿದೆ. ಭೌಗೋಳಿಕ ಆಹಾರ ಪದ್ದತಿಗೆ ವಿರುದ್ದವಾಗಿ ಒಂದೇ ರೀತಿಯಾದ ಆಹಾರ ಸೇವನೆಯ ಕಾರಣದಿಂದ ಜನರ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತಿದೆ. ಇದನ್ನು ತಪ್ಪಿಸಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ" ಎಂದು ಹೇಳಿದರು.
"ಫಲಾನುಭವಿಗಳಿಗೆ ನೀಡುತ್ತಿರುವ ಒಟ್ಟು ಪ್ರಮಾಣದಲ್ಲಿ ಕಡಿತ ಮಾಡಿಲ್ಲ. ಬದಲಾಗು ಬದಲಾವಣೆ ಮಾಡಲಾಗುತ್ತದೆ. ಜನರು ಏನನ್ನು ತಿನ್ನಲು ಇಚ್ಛಿಸುತ್ತಾರೋ ಅದನ್ನೇ ನೀಡುತ್ತಿದ್ದೇವೆ. ಸಂಪೂರ್ಣವಾಗಿ ಅಕ್ಕಿಯನ್ನೇ ನೀಟಿ ಎಂದು ಜನರು ಒತ್ತಾಯಿಸಿದ್ದಲ್ಲಿ ಅದನ್ನೇ ನೀಡುತ್ತೇವೆ" ಎಂದರು.
"ರಾಜ್ಯದಲ್ಲಿ ಬೆಳೆಯುವ ಭತ್ತ, ರಾಗಿ ಹಾಗೂ ಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಿ ಪಡಿತರ ವ್ಯವಸ್ಥೆಯ ಮೂಲಕ ಎ.1ರಿಂದ ವಿತರಣೆ ಮಾಡಲಾಗುವುದು" ಎಂದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಪಕ್ಷದಿಂದ ನೋಟಿಸ್ ಜಾರಿಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ನಾವೆಲ್ಲರೂ ಕೂಡಾ ಗೆಳೆಯರು. ನೋಟಿಸ್ ಬರುತ್ತಿರುತ್ತದೆ. ಬೇಡವೆಂದರೂ ಕೂಡಾ ಲವ್ ಲೆಟರ್ ಬರುತ್ತಿರುತ್ತದೆ. ಆದರೆ, ಅವರೇನು ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿಲ್ಲ" ಎಂದು ಹೇಳಿದರು.
"ಉತ್ತರ ಕರ್ನಾಟಕಕ್ಕೆ ಅನ್ಯಯವಾದ ಸಂದರ್ಭ ಪ್ರತಿಭಟನೆ ಮಾಡುತ್ತೇನೆ. ಮಂತ್ರಿಯಾದ ಮಾತ್ರಕ್ಕೆ ಸುಮ್ಮನೆ ಕೂರುವುದಿಲ್ಲ" ಎಂದು ತಿಳಿಸಿದರು.