ಹುಬ್ಬಳ್ಳಿ, ಫೆ.13 (DaijiworldNews/MB) : ''ತನ್ನ ನಾಯಕತ್ವಕ್ಕೆ ಉಂಟಾಗಿರುವ ಸಂಕಷ್ಟದಿಂದ ಹಾಗೂ ಮುಜುಗರದಿಂದ ತಪ್ಪಿಸಿಕೊಳ್ಳಲು ಕುರುಬ ಸಮಾಜದ ಹೋರಾಟದ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಇದೆ ಎಂದು ಸಿದ್ದರಾಮಯ್ಯನವರು ಹೇಳುತ್ತಿದ್ದಾರೆ'' ಎಂದು ಸಚಿವ ಜಗದೀಶ ಶೆಟ್ಟರ್ ಟಾಂಗ್ ನೀಡಿದ್ದಾರೆ.
ಶನಿವಾರ ನಗರದಲ್ಲಿ ನೂತನ ಕೈಗಾರಿಕಾ ನೀತಿ 2020–25 ಮತ್ತು ಹೂಡಿಕೆ ಅವಕಾಶಗಳು ಕುರಿತು ಅರಿವು ಮೂಡಿಸುವ ಕಾರ್ಯಕ್ರಮಕ್ಕೂ ಮುನ್ನ ಮಾಧ್ಯಮದೊಂದಿಗೆ ಈಶ್ವರಪ್ಪನವರು ಮಾತನಾಡಿದರು.
''ಅಭದ್ರತೆಯೂ ಸಿದ್ದರಾಮಯ್ಯ ಅವರನ್ನು ಕಾಡುತ್ತಿದೆ. ಕುರುಬರ ನಾಯಕ ಎಂದು ಬಿಂಬಿಸಿಕೊಂಡಿದ್ದ ಅವರಿಗೆ ಲಕ್ಷಾಂತರ ಮಂದಿಯಿದ್ದ ಸಮಾವೇಶಕ್ಕೆ ಹಾಜರಾಗಲು ಆಗಲಿಲ್ಲ. ಆ ಸಮಾಜದ ಸ್ವಾಮಿಗಳು ಖುದ್ದು ಸಿದ್ದರಾಮಯ್ಯ ಅವರ ಮನೆಗೆ ಹೋಗಿ ಆಹ್ವಾನ ನೀಡಿದರೂ ಸಿದ್ದರಾಮಯ್ಯನವರು ಹೋಗಿಲ್ಲ. ಇದರಿಂದ ಮುಜುಗರದಿಂದ ತಪ್ಪಿಸಿಕೊಳ್ಳಲು ಅವರು ಆರ್ಎಸ್ಎಸ್ ಹೆಸರು ಹೇಳುತ್ತಿದ್ದಾರೆ'' ಎಂದು ದೂರಿದರು.
''ಎಲ್ಲಾ ವಿಚಾರಕ್ಕೂ ಆರ್ಎಸ್ಎಸ್ನ್ನು ಗುರಿಯಾಗಿಸುವ ಅವರು, ಪಾದಯಾತ್ರೆ ಪ್ರಾರಂಭಕ್ಕೂ ಮೊದಲೇ ಈ ಪಾದಯಾತ್ರೆಯಲ್ಲಿ ಆರ್ಎಸ್ಎಸ್ ಪಾತ್ರವಿದೆ ಎಂದು ಯಾಕೆ ಹೇಳಿಲ್ಲ'' ಎಂದು ಪ್ರಶ್ನಿಸಿದರು. ಹಾಗೆಯೇ, ''ಸಿದ್ದರಾಮಯ್ಯನವರು ಮೊದಲು ಎಲ್ಲಾ ವಿಚಾರಕ್ಕೂ ಆರ್ಎಸ್ಎಸ್ನ್ನು ಗುರಿ ಮಾಡುವುದನ್ನು ಬಿಡಬೇಕು'' ಎಂದು ಹೇಳಿದರು.