ನವದೆಹಲಿ, ಫೆ.13 (DaijiworldNews/MB) : ''ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭಾರತದ ಬೊಗಳೆದಾಸ ಆಗಿಬಿಟ್ಟಿದ್ದಾರೆ'' ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲೆ ಶನಿವಾರ ರಾಹುಲ್ ಗಾಂಧಿ ವಿರುದ್ದ ಹೌಹಾರಿದರು.
ಬಜೆಟ್-2021 ಮೇಲಿನ ಚರ್ಚೆಗೆ ಲೋಕಸಭೆಯಲ್ಲಿ ಪ್ರತಿಕ್ರಿಯೆ ನೀಡುವ ವೇಳೆ ಮಾತನಾಡಿದ ಅವರು, ''ಕೇಂದ್ರ ಸರ್ಕಾರದ ಎಲ್ಲಾ ಕಾರ್ಯವನ್ನು ರಾಹುಲ್ ಗಾಂಧಿ ಟೀಕಿಸುತ್ತಿದ್ದಾರೆ. ಹಾಗೆಯೇ ಸುಳ್ಳು ಕಥೆಗಳನ್ನು ಕೂಡಾ ಸೃಷ್ಟಿ ಮಾಡುತ್ತಿದ್ದಾರೆ'' ಎಂದು ಆರೋಪಿಸಿದ್ದು, ''ಆದರೆ ಅವರು ಮಾಡುವ ಆರೋಪಕ್ಕೆ ಸರ್ಕಾರ ನೀಡುವ ಪ್ರತಿಕ್ರಿಯೆಯನ್ನು ಆಲಿಸುವ ಸಹನೆ ಅವರಿಗಿಲ್ಲ'' ಎಂದು ಕುಟುಕಿದರು.
''ಕಾಂಗ್ರೆಸ್ ಪಕ್ಷದಲ್ಲಿ ಎರಡು ಪ್ರವೃತ್ತಿ ಇದ್ದು, ಕಾಂಗ್ರೆಸ್ ನಾಯಕರಿಗೆ ಪ್ರಜಾಸತ್ತಾತ್ಮಕವಾಗಿ ಚುನಾಯಿತಗೊಂಡ ಸಂಸದೀಯ ವ್ಯವಸ್ಥೆ ಮೇಲೆ ವಿಶ್ವಾಸ, ನಂಬಿಕೆ ಇಲ್ಲ ಎಂಬುದು ಇದರಿಂದಲೇ ತಿಳಿದು ಬರುತ್ತದೆ'' ಎಂದು ಹೇಳಿದರು.
ಹಾಗೆಯೇ, ''ರಾಹುಲ್ ಗಾಂಧಿ ಸದನದಲ್ಲಿ 10 ವಿಷಯಗಳ ಬಗ್ಗೆ ಮಾತನಾಡುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ ಅವರು ಯಾವುದನ್ನೂ ಪ್ರಸ್ತಾಪವೇ ಮಾಡದೆ, ಬಜೆಟ್ ಬಗೆಯೂ ಮಾತನಾಡದೆ ಇರುವುದು ಬೇಸರ ಮೂಡಿಸಿದೆ'' ಎಂದು ಲೇವಡಿ ಮಾಡಿದರು.