ನವದೆಹಲಿ, ಫೆ.13 (DaijiworldNews/MB) : ಗಣರಾಜ್ಯೋತ್ಸವ ದಿನವಾದ ಜನವರಿ 26 ರಂದು ದೆಹಲಿಯಲ್ಲಿ ನಡೆದ ಟ್ಯ್ರಾಕ್ಟರ್ ರ್ಯಾಲಿ ಸಂದರ್ಭ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇನ್ನೂ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಸುಖ್ಮೀತ್ ಸಿಂಗ್ (35), ಗುಣ್ದೀಪ್ ಸಿಂಗ್ (33) ಮತ್ತು ಹರ್ವೀಂದರ್ ಸಿಂಗ್ (32) ಎಂದು ಗುರುತಿಸಲಾಗಿದೆ.
ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಫೆಬ್ರವರಿ 10 ರಂದು ಬಂಧಿಸಲಾಗಿತ್ತು. ಈಗ ಮತ್ತೆ ಮೂವರನ್ನು ಬಂಧಿಸಿದ್ದಾರೆ. ಒಟ್ಟಾರೆ ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈವರೆಗೆ ಒಟ್ಟು 14 ಜನರನ್ನು ಬಂಧಿಸಲಾಗಿದೆ.
ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಗಣರಾಜ್ಯೋತ್ಸವದಂದು, ರೈತರು ನಡೆಸಿದ ಟ್ಯ್ರಾಕ್ಟರ್ ರ್ಯಾಲಿ ಸಂದರ್ಭ ಭಾರೀ ಹಿಂಸಾಚಾರ ನಡೆದಿದ್ದು ಈ ಸಂದರ್ಭ ಹಲವು ಪೊಲೀಸರು, ರೈತರು ಗಾಯಗೊಂಡಿದ್ದಾರೆ. ಹಲವು ವಾಹನಗಳಿಗೆ ಹಾನಿಯಾಗಿದೆ.
ಈಗಾಗಲೇ ಈ ಪ್ರಕರಣದ ಪ್ರಮುಖ ಆರೋಪಿ ನಟ ದೀಪ್ ಸಿಧು ಅನ್ನು ಬಂಧಿಸಲಾಗಿದೆ.