ನವದೆಹಲಿ, ಫೆ.13 (DaijiworldNews/PY): 2020ರಲ್ಲಿ ಸಂಭವಿಸಿದ ಪ್ರವಾಹ, ಚಂಡಮಾರುತದಂತಹ ನೈಸರ್ಗಿಕ ವಿಕೋಪಕ್ಕೆ ಒಳಗಾಗಿರುವಂತ ಒಂದು ಕೇಂದ್ರಾಡಳಿತ ಪ್ರದೇಶ ಹಾಗೂ ಐದು ರಾಜ್ಯಗಳಿಗೆ 3,113 ಕೋಟಿ. ರೂ. ಪರಿಹಾರ ಒದಗಿಸಲು ಶನಿವಾರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಉನ್ನತ ಮಟ್ಟದ ಸಮಿತಿ ಅನುಮತಿ ನೀಡಿದೆ.
ಬಿಹಾರ ಸೇರಿದಂತೆ ಮಧ್ಯಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು, ಬಿಹಾರ, ಪುದುಚೆರಿ ಇವುಗಳು ಎನ್ಡಿಆರ್ಎಫ್ನಿಂದ ಹೆಚ್ಚುವರಿ ಕೇಂದ್ರದ ನೆರವು ಪಡೆಯುವ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಾಗಿವೆ ಎಂದು ಗೃಹ ಸಚಿವಾಲಯದ ಹೇಳಿಕೆ ತಿಳಿಸಿದೆ.
ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ, 2020ರಲ್ಲಿ ಬುರೆವಿ, ನಿವಾರ್ ಚಂಡಮಾರುತ, ಪ್ರವಾಹ ಹಾಗೂ ಕೀಟಗಳ ದಾಳಿಯಿಂದ ಹಾನಿಗೊಳಗಾದ ನಾಲ್ಕು ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿ ಕೇಂದ್ರದ ನೆರವು ನೀಡಲು ಅನುಮೋದನೆ ನೀಡಲಾಗಿದೆ.
ಪ್ರವಾಹದ ಕಾರಣ ಹಾನಿಗೊಳಗಾದ ಆಂಧ್ರಪ್ರದೇಶಕ್ಕೆ 280.78 ಕೋಟಿ.ರೂ. ಹಾಗೂ 1,255.27 ಕೋಟಿ. ರೂ.ಗಳನ್ನು ಬಿಹಾರಕ್ಕೆ ನೀಡಲಾಗಿದೆ. ನಿವಾರ್ ಹಾಗೂ ಬುರೆವಿ ಚಂಡಮಾರುತದಿಂದ ತತ್ತರಿಸಿದ ತಮಿಳುನಾಡುವಿಗೆ 63.14 ಕೋಟಿ.ರೂ ಹಾಗೂ 255.77 ಕೋಟಿ. ರೂ.ಗಳನ್ನು ನೀಡಲು ಅನುಮೋದನೆ ನೀಡಲಾಗಿದೆ.
ನಿವಾರ್ ಚಂಡಮಾರುತದಿಂದ ಹಾನಿಗೊಳಗಾದ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಗೆ 9.91 ಕೋಟಿ. ರೂ. ಹಾಗೂ ಕೀಟಗಳ ದಾಳಿಯಿಂದ ಹಾನಿಗೊಳಗಾದ ಮಧ್ಯಪ್ರದೇಶಕ್ಕೆ 1,280 ಕೋಟಿ.ರೂ. ಬಿಡುಗಡೆ ಮಾಡಲು ಅನುಮತಿ ನೀಡಲಾಗಿದೆ.