ನವದೆಹಲಿ, ಫೆ.13 (DaijiworldNews/MB) : ''ಪ್ರತಿಭಟನೆಯನ್ನು ಯಾವುದೇ ಸಮಯ, ಎಲ್ಲೆಡೆಯಲ್ಲಿ ನಡೆಸಲು ಸಾಧ್ಯವಿಲ್ಲ'' ಎಂದು ಸುಪ್ರೀಂಕೋರ್ಟ್ ತನ್ನ ಆದೇಶವೊಂದರಲ್ಲಿ ಹೇಳಿದೆ. ನ್ಯಾಯಾಲಯವು 2019ರಲ್ಲಿ ದೆಹಲಿಯ ಶಾಹೀನ್ ಬಾಗ್ನಲ್ಲಿ ಪೌರತ್ವ ಕಾನೂನು ವಿರುದ್ಧ ನಡೆದ ಪ್ರತಿಭಟನೆಯ ಕುರಿತಾಗಿ ಸಲ್ಲಿಸಿರುವ ಪುನರ್ ಪರಿಶೀಲನಾ ಅರ್ಜಿಯನ್ನು ರದ್ದುಗೊಳಿಸಿದೆ.
ಸುಪ್ರೀಂಕೋರ್ಟ್ ಶಾಹೀನ್ ಬಾಗ್ನಲ್ಲಿ ನಡೆದ ಪೌರತ್ವ ವಿರೋಧಿ ಕಾನೂನು ಪ್ರತಿಭಟನೆಗಳು ಕಾನೂನುಬಾಹಿರವೆಂದು ಕಳೆದ ವರ್ಷ ತೀರ್ಪು ನೀಡಿದ್ದು ಇದರ ಪರಿಶೀಲನೆಗೆ ಕೋರಿ 12 ಕಾರ್ಯಕರ್ತರು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ತೀರ್ಪು ನೀಡಿದ, ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್, ಅನಿರುದ್ಧ ಬೋಸ್ ಹಾಗೂ ಕೃಷ್ಣ ಮುರಾರಿ ಅವರಿದ್ದ ತ್ರಿಸದಸ್ಯ ಪೀಠ, ''ಕೆಲವು ನಿರ್ದಿಷ್ಟ ಕರ್ತವ್ಯದೊಂದಿಗೆ ಪ್ರತಿಭಟನೆ ಹಾಗೂ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕು ಬರುತ್ತದೆ. ಯಾವುದೇ ಸಮಯ, ಎಲ್ಲೆಡೆಯೂ ಪ್ರತಿಭಟಿಸಬಾರದು. ಕೆಲವು ಸ್ವಯಂ ಪ್ರೇರಿತ ಪ್ರತಿಭಟನೆಗಳು ಇರಬಹುದು. ಆದರೆ, ದೀರ್ಘಕಾಲದ ಭಿನ್ನಾಭಿಪ್ರಾಯ ಅಥವಾ ಪ್ರತಿಭಟನೆಯ ವೇಳೆ ಇತರ ಹಕ್ಕುಗಳ ಮೇಲೆ ಪರಿಣಾಮ ಬೀರುವ, ಸಾರ್ವಜನಿಕ ಸ್ಥಳವನ್ನು ಆಕ್ರಮಿಸಲು ಆಗದು'' ಎಂದು ಹೇಳಿದ್ದು ಪುನರ್ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದೆ.