ಭವಾನಿಪಟ್ನಾ, ಫೆ.13 (DaijiworldNews/HR): ಕಳೆದ 11 ದಿನಗಳಲ್ಲಿ ಒಟ್ಟು ನಾಲ್ಕು ಹೆಣ್ಣು ಆನೆಗಳು ಮೃತಪಟ್ಟಿರುವ ಘಟನೆ ಒಡಿಶಾದ ಕಲಹಂಡಿ ಜಿಲ್ಲೆಯ ಕಾರ್ಲಾಪತ್ ವನ್ಯಜೀವಿ ಧಾಮದಲ್ಲಿ ನಡೆದಿದೆ.
ಫೆಬ್ರವರಿ 1 ರಂದು ವನ್ಯಧಾಮದ ತೆಂಟುಲಿಪಾದ ಗ್ರಾಮದ ಬಳಿ ಮೊದಲ ಹೆಣ್ಣು ಆನೆಯ ಶವ ಪತ್ತೆಯಾಗಿದ್ದು, ಇದೇ ಪ್ರದೇಶದಲ್ಲಿ ಫೆಬ್ರುವರಿ 9, 10 ಮತ್ತು11 ರಂದು ತಲಾ ಒಂದು ಹೆಣ್ಣು ಆನೆಯ ಮೃತದೇಹಗಳು ಸಿಕ್ಕಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆನೆಗಳ ಸಾವಿನ ಕುರಿತು ಮಾಹಿತಿ ನೀಡಿರುವ ಅರಣ್ಯದ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಶಶಿಪಾಲ್, "ಬ್ಯಾಕ್ಟೀರಿಯಾದ ಸೋಂಕಿನಿಂದಾಗಿ ಆನೆಗಳು ಮೃತಪಟ್ಟಿದ್ದು, ವನ್ಯಧಾಮದಲ್ಲಿರುವ ಜಲಮೂಲಗಳಿಗೂ ಬಹುಶಃ ಸೋಂಕು ತಗುಲಿರುವ ಸಾಧ್ಯತೆಗಳಿವೆ" ಎಂದು ತಿಳಿಸಿದ್ದಾರೆ.
ಇನ್ನು "ವನ್ಯಧಾಮದ ಜಲಮೂಲಗಳು ಕಲುಷಿತಗೊಂಡಿರುವ ಸಾಧ್ಯತೆಗಳಿದ್ದು, ಸ್ಥಳೀಯರು ತಮ್ಮ ಜಾನುವಾರುಗಳನ್ನು ಅರಣ್ಯ ಪ್ರದೇಶಕ್ಕೆ ಬಿಡಬಾರದು" ಎಂದು ವಿಭಾಗೀಯ ಅರಣ್ಯ ಅಧಿಕಾರಿ ಅಶೋಕ್ ಕುಮಾರ್ ಹೇಳಿದ್ದಾರೆ.