ಬೆಂಗಳೂರು, ಫೆ.13 (DaijiworldNews/HR): 'ಸ್ವಚ್ಛ ಸರ್ವೇಕ್ಷಣ್ ಅಭಿಯಾನ-2021'ರ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಶನಿವಾರ ಏರ್ಪಡಿಸಿದ್ದ 'ಸೈಕ್ಲಥಾನ್'ಗೆ ಆಡಳಿತಾಧಿಕಾರಿ ಗೌರವ್ ಗುಪ್ತ ಚಾಲನೆ ನೀಡಿದರು.
ಈ ಕುರಿತು ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, "ನಗರದಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸಲು ಸೈಕ್ಲಥಾನ್ ಹಮ್ಮಿಕೊಳ್ಳಲಾಗಿದ್ದು, ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳುವ ಮೂಲಕ ನಗರಕ್ಕೆ ಉತ್ತಮ ಅಂಕ ಬರಲು ಸಹಕರಿಸಬೇಕು" ಎಂದರು.
ಇನ್ನು "ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಾಲಿಕೆ, ಸ್ಮಾರ್ಟ್ ಸಿಟಿ ಹಾಗೂ ಡಲ್ಟ್ ವತಿಯಿಂದ ನಗರದಲ್ಲಿ ಸೈಕಲ್ ಪಥಗಳನ್ನು ಹಾಗೂ ಸುರಕ್ಷಿತ ಪಾದಚಾರಿ ಮಾರ್ಗಗಳನ್ನು ನಿರ್ಮಿಸಲಾಗುತ್ತಿದ್ದು, ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವುಮಾಡಿಕೊಡಲಾಗುತ್ತಿದೆ" ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ವಿಶೇಷ ಆಯುಕ್ತ ಜೆ.ಮಂಜುನಾಥ್, ಜಂಟಿ ಆಯುಕ್ತರ ಸರ್ಫರಾಜ್ ಖಾನ್, ಮುಖ್ಯ ಎಂಜಿನಿಯರ್ ವಿಶ್ವನಾಥ್ ಭಾಗವಹಿಸಿದ್ದರು.