ನವದೆಹಲಿ, ಫೆ.13 (DaijiworldNews/PY): "ಪೊಲೀಸ್ ಪೇದೆಯೋರ್ವರ ಮೇಲೆ ಟೆಕ್ರಿ ಗಡಿಯಲ್ಲಿ ಹಲ್ಲೆ ನಡೆದಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ನಾಪತ್ತೆಯಾಗಿರುವ ರೈತರ ಬಗ್ಗೆ ಭಿತ್ತಿಪತ್ರ ಅಂಟಿಸಲು ಹೋಗಿದ್ದ ಸಂದರ್ಭ ಪೊಲೀಸ್ ಪೇದೆಯೋರ್ವರ ಮೇಲೆ ಹಲ್ಲೆ ನಡೆದಿದೆ.
ಹಲ್ಲೆಗೊಳಗಾದ ಪೊಲೀಸ್ ಪೇದೆಯನ್ನು ಜಿತೇಂದರ್ ರಾಣ ಎಂದು ಗುರುತಿಸಲಾಗಿದೆ.
"ನಾಗೊಲಿ ಪೊಲೀಸ್ ಠಾಣೆಯಲ್ಲಿ ಜಿತೇಂದರ್ ಸಿಂಗ್ ಅವರು ಕರ್ತವ್ಯಕ್ಕೆ ನಿಯೋಜನೆಯಾಗಿದ್ದರು. ಹಲ್ಲೆ ನಡೆದ ಸಂದರ್ಭ ಜಿತೇಂದರ್ ಅವರ ತಲೆಗೆ ಹಾಗೂ ಇತರ ಅಂಗಾಂಗಗಳಿಗೆ ಗಾಯವಾಗಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
"ಜ.26ರ ಗಣರಾಜ್ಯೋತ್ಸವ ದಿನದಂದು ನಡೆದ ಟ್ರ್ಯಾಕ್ಟರ್ ರ್ಯಾಲಿಯ ಸಂದರ್ಭ ನಡೆದ ಹಿಂಸಾಚಾರದ ವೇಳೆ ನಾಪತ್ತೆಯಾದ ರೈತರ ಬಗ್ಗೆ ಭಿತ್ತಿಚಿತ್ರ ಅಂಟಿಸಲು ಜಿತೇಂದರ್ ಸಿಂಗ್ ಪ್ರತಿಭಟನಾ ಸ್ಥಳಕ್ಕೆ ಹೋಗಿದ್ದರು. ಈ ವೇಳೆ ಅವರ ಮೇಲೆ ಹಲ್ಲೆ ನಡೆದಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಹೇಳಿದ್ದಾರೆ.
"ಘಟನೆಯ ಸಂಬಂಧ ಎಫ್ಐಆರ್ ದಾಖಲಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ" ಎಂದಿದ್ದಾರೆ.