ನವದೆಹಲಿ,ಫೆ.13 (DaijiworldNews/HR): ಕೊರೊನಾ ಸಂಕಷ್ಟದ ಸಮಯದಲ್ಲಿಯೂ ದೇಶದ ಯಾವುದೇ ಭಾಗದಲ್ಲಿ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಂಡಿದ್ದು, ಈ ವರ್ಷ ರಸಗೊಬ್ಬರ ಪೂರೈಕೆ ಶೇಕಡಾ 25ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.
ಈ ಕುರಿತು ರಾಜ್ಯಸಭೆಯಲ್ಲಿ ಉಕ್ರವಾರ ಪ್ರಶ್ನೋತ್ತರ ವೇಳೆ ಜಿ ಬಿ ಎಲ್ ನರಸಿಂಹರಾವ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, "ಕೊರೊನಾದಿಂದಾಗಿ ರಸಗೊಬ್ಬರ ಉತ್ಪಾದನೆ ಮತ್ತು ಸಾಗಣೆ ಮಾಡುವುದು ಒಂದು ದೊಡ್ಡ ಸವಾಲಾಗಿದ್ದು, ಕೆಲಸಗಾರರ ಪೈಕಿ ಯಾರಿಗಾದರು ಕೊರೊನಾ ಸೋಂಕು ತಗುಲಿದರೆ ಇಡೀ ಫ್ಯಾಕ್ಟರಿಯನ್ನೇ ಮುಚ್ಚಬೇಕಾದ ಪರಿಸ್ಥಿತಿ ಇತ್ತು. ಅದೇ ರೀತಿ ಸಾಗಣೆ ಮಾಡುವಾಗ, ಲೋಡ್, ಅನ್ಲೋಡ್ ಮಾಡುವಾಗ ಕಾರ್ಮಿಕರ ಕೊರತೆ ಎದುರಾಗಿತ್ತು. ಆದರೆ ಇವನ್ನೆಲ್ಲ ಸಮರ್ಪಕವಾಗಿ ನಿಭಾಯಿಸಲಾಗಿದೆ" ಎಂದರು.
ಇನ್ನು "ಅತಿವೃಷ್ಟಿಯಿಂದ ಕೆರೆ-ಕುಂಟೆಗಳು, ನೀರಾವರಿ ಜಲಾಶಯಗಳು ತುಂಬಿದ್ದು, ಬಿತ್ತನೆ ಪ್ರದೇಶ ವೃದ್ಧಿಸಿ ರಸಗೊಬ್ಬರ ಬೇಡಿಕೆಯೂ ಹೆಚ್ಚಾಯಿತು. ಹೆಚ್ಚಾದ ಬೇಡಿಕೆಯನ್ನು ಪೂರೈಸಿ ಎಲ್ಲಿಯೂ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಲಾಯಿತು. ಇದರಿಂದಾಗಿ ಕೃಷಿ ವಲಯ ಶೇ. 3.7 ರಷ್ಟು ಬೆಳವಣಿಗೆ ಸಾಧಿಸಲು ಸಾಧ್ಯವಾಯಿತು" ಎಂದು ಹೇಳಿದ್ದಾರೆ.
ಕೊರೊನಾ ಸಾಂಕ್ರಮಿಕದ ಮಧ್ಯೆಯೂ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಂಡದಕ್ಕಾಗಿ ಸಚಿವ ಡಿ ವಿ ಸದಾನಂದ ಗೌಡರನ್ನು ಸಭಾಪೀಠದಲ್ಲಿದ್ದ ಉಪರಾಷ್ಟ್ರಪತಿ ಶ್ರೀ ವೆಂಕಯ್ಯ ನಾಯ್ಡು ಅವರು ಅಭಿನಂದಿಸಿದರು.