ನವದೆಹಲಿ, ಫೆ.13 (DaijiworldNews/PY): "ಕೇಂದ್ರ ಸರ್ಕಾರದೊಂದಿಗೆ ಒಪ್ಪಂದಕ್ಕೆ ಬರುವಲ್ಲಿಯವರೆಗೆ ಪ್ರತಿಭಟನಾ ರೈತರು ಮನೆಗೆ ಮರಳಲ್ಲ" ಎಂದು ಭಾರತೀಯ ಕಿಸಾನ್ ಯೂನಿಯನ್ನ ಮುಖಂಡ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.
ಈ ಸಂದರ್ಭ ಅವರು ಪ್ರಧಾನಿ ಮೋದಿ ಅವರು ತವರು ರಾಜ್ಯವಾದ ಗುಜರಾತ್ನಲ್ಲಿ ರೈತ ನಾಯಕರು ಸಭೆ ನಡೆಸುವ ವಿಚಾರದ ಬಗ್ಗೆ ಸುಳಿವು ನೀಡಿದ್ದಾರೆ.
"ನೂತನ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಳ್ಳದೇ ಇದ್ದಲ್ಲಿ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ" ಎಂದು ಟಿಕಾಯತ್ ಅವರು ಈ ಹಿಂದೆ ಹೇಳಿದ್ದರು.
"ಸಂಪೂರ್ಣವಾಗಿ ಕೃಷಿ ಕಾಯ್ದೆಗಳನ್ನು ರದ್ದು ಮಾಡುವ ಬೇಡಿಕೆಯ ಬದಲಾಗಿ ಬೇರೆ ಆಯ್ಕೆಗಳ ಬಗ್ಗೆ ಕೂಡಾ ಯೋಚನೆ ಮಾಡಿ" ಎಂದು ರೈತರಿಗೆ ಕೇಂದ್ರ ಸರ್ಕಾರ ಹೇಳುತ್ತಾ ಬಂದಿದೆ.
"ಕೇಂದ್ರ ಸರ್ಕಾರವು ರೈತ ಸಂಘಟನೆಗಳ ಜೊತೆ ಮಾತುಕತೆ ನಡೆಸಬೇಕಾಗುತ್ತದೆ" ಎಂದು ಟಿಕಾಯತ್ ತಿಳಿಸಿದ್ದಾರೆ.
ಟಿಕ್ರಿ ಗಡಿಯಲ್ಲಿ ಆಯೋಜಿಸಲಾಗಿದ್ದ ಮಹಾಪಂಚಾಯತ್ ಉದ್ದೇಶಿಸಿ ಮಾತನಾಡಿದ ಅವರು, "ಸಮಿತಿಯ ಜೊತೆ ಕೇಂದ್ರ ಮಾತುಕತೆ ನಡೆಸಿ ಒಪ್ಪಂದಕ್ಕೆ ಬರುವವರೆಗೆ ನಮ್ಮ ಪ್ರತಿಭಟನೆ ಮುಂದುವರೆಯಲಿದೆ. ಅಲ್ಲಿಯ ತನಕ ರೈತರು ಮನೆಗೆ ಮರಳುವುದಿಲ್ಲ" ಎಂದಿದ್ದಾರೆ.
"ಪಂಜಾಬ್ ಸೇರಿದಂತೆ ಹರಿಯಾಣ ಹಾಗೂ ಉತ್ತರಪ್ರದೇಶಕ್ಕೆ ಮಾತ್ರವೃ ಪ್ರತಿಭಟನೆ ಸೀಮಿತವಲ್ಲ. ಪ್ರತಿಭಟನೆಯು ದೇಶಾದ್ಯಂತ ಹರಡಿದೆ" ಎಂದು ಹೇಳಿದ್ದಾರೆ.
"ಮುಂದಿನ ದಿನಗಳಲ್ಲಿ ಮತ್ತಷ್ಟು ಮಹಾಪಂಚಾಯತ್ಗಳು ನಡೆಯಲಿದ್ದು, ಗುಜರಾತ್ಗೆ ತೆರಳಲಿದ್ದೇವೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ಗುಜರಾತ್ ರೈತರ ಮೇಲೆ ಒತ್ತಡ ಹೇರಲಾಗುತ್ತಿದೆ" ಎಂದಿದ್ದಾರೆ.