ನವದೆಹಲಿ, ಫೆ.13 (DaijiworldNews/PY): "22 ತಿಂಗಳಿನಲ್ಲಿ ರೈಲ್ವೆ ಅಪಘಾತದಿಂದ ಒಂದೇ ಒಂದು ಸಾವು ಸಂಭವಿಸಿಲ್ಲ" ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಈ ಬಗ್ಗೆ ತಿಳಿಸಿದ ಅವರು, "ನಾವು ಆರು ವರ್ಷಗಳಿಂದ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದೇವೆ. 2019ರಲ್ಲಿ ನಡೆದ ರೈಲ್ವೆ ಅಪಘಾತದಲ್ಲಿ ಓರ್ವ ಪ್ರಯಾಣಿಕ ಮೃತಪಟ್ಟಿದ್ದನ್ನು ಬಿಟ್ಟರೆ, ಇಲ್ಲಿಯವರೆಗೆ ಯಾವುದೇ ಸಾವು ಸಂಭವಿಸಿಲ್ಲ" ಎಂದಿದ್ದಾರೆ.
"ಪ್ರಸ್ತುತ ಶೇ.70ರಷ್ಟು ಪ್ರಯಾಣಿಕ ರೈಲು ಕಾರ್ಯಾಚರಿಸುತ್ತಿವೆ. ನಮ್ಮ ಸರ್ಕಾರವು ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದೆ. ರೈಲ್ವೆ ಸುರಕ್ಷತಾ ಕೆಲಸಗಳಿಗೆ ಅಧಿಕ ಅನುದಾನವನ್ನು ಕೂಡಾ ವಿನಯೋಗಿಸುತ್ತಿದೆ. ಮೊಲ ಬಾರಿಗೆ ಪುನರ್ರಚಿತ ಮಂಡಳಿಯಲ್ಲಿ ಸುರಕ್ಷತಾ ಮಹಾನಿರ್ದೇಶಕರನ್ನು ನೇಮಕ ಮಾಡಲಾಗಿದೆ. ಅವರು ಸುರಕ್ಷತೆಗಾಗಿ ಪೂರ್ಣ ಗಮನಹರಿಸಿರುತ್ತಾರೆ" ಎಂದು ಹೇಳಿದ್ದಾರೆ.